ಗೋಣಿಕೊಪ್ಪಲು, ಫೆ. ೫: ದ. ಕೊಡಗಿನ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ನೊಕ್ಯ ಗ್ರಾಮದ ಮರಪಾಲ ಬಳಿಯ ಕಾವೇರಪ್ಪ (ರಮೇಶ್) ಎಂಬವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದುಕೊಂಡಿದೆ. ಮುಂಜಾನೆ ವೇಳೆ ಹುಲಿಯು ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದು ನಂತರ ಹಸುವಿನ ಮೇಲೆ ದಾಳಿ ನಡೆಸಿದೆ. ಹಸುವಿನ ಮಾಂಸವನ್ನು ತಿಂದು ಹುಲಿಯು ಕಾಲ್ಕಿತ್ತಿದೆ.
ಹಸುವಿನ ನಿರೀಕ್ಷೆಯಲ್ಲಿದ್ದ ಮನೆಯ ಮಾಲೀಕರು ಹಸು ಮನೆಯ ಬಳಿ ಬಾರದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಹಸು ತೋಟದಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ. ಹಸುವಿನ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಿತಿಮತಿ ವಲಯ ಅರಣ್ಯದ ಎಸಿಎಫ್ ಸೀಮಾ, ಆರ್ಎಫ್ಓ ಅಶೋಕ್ ಹುನಗುಂದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಸಂಚಾರದ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.