ಮಡಿಕೇರಿ, ಫೆ. ೫: ಮಡಿಕೇರಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಮಹಿಳಾ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕಿ ನಿರ್ಮಲಾ ಹೆಚ್.ಪಿ., ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಪತ್ರಕರ್ತ ಚಂದನ್ ನಂದರಬೆಟ್ಟು ಹಾಗು ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಸಿಂಧೂ ಹಾಜರಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಹೆಚ್.ಎಲ್. ದಿವಾಕರ್ ವಿದ್ಯಾರ್ಥಿ ನಿಯರಿಗೆ ಓದುವಿಕೆಯನ್ನು ಕುರಿತು ಹಾಗೂ ಡಿ.ಎಸ್.ಎಸ್.ನಿಂದ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ನಿರ್ಮಲ ಹೆಚ್.ಪಿ. ಅವರು ವಿದ್ಯಾರ್ಥಿನಿಯರಿಗೆ ಸಂವಿಧಾನದ ಮಹತ್ವವನ್ನು ಕುರಿತು ಮಾಹಿತಿ ನೀಡಿದರು. ಸಂವಿಧಾನದ ವಿಧಿ, ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯವನ್ನು ಕುರಿತು ವಿವರಿಸಿದರು.
ದೀಪಕ್ ಪೊನ್ನಪ್ಪ ಅವರು ಗಣ ರಾಜ್ಯ ಎಂದರೆ ಏನು ಎಂದು ವಿದ್ಯಾರ್ಥಿನಿಯರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದರಲ್ಲದೆ, ಸಂವಿಧಾನದ ಪಿತಾಮಹರಾದಂತಹ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.
ಪತ್ರಕರ್ತ ಚಂದನ್ ನಂದರಬೆಟ್ಟು ಮಾತನಾಡಿ, ಜಾತಿ ವ್ಯವಸ್ಥೆ ನಮ್ಮ ಸಮಾಜದಲ್ಲಿ ಹೇಗೆ ಬೆಳೆದು ಹೆಮ್ಮರವಾಗಿ ನಿಂತಿದೆ. ಜಾತಿಯ ರೇಖೆಯನ್ನು ಮೀರಿ ಸಾಧನೆಯನ್ನು ಮಾಡಬೇಕು. ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು. ಹಾಗೆಯೇ ವಿದ್ಯಾರ್ಥಿನಿಯರು ಸಂವಿಧಾನದ ರಚನೆಯ ಬಗ್ಗೆ, ಸಂವಿಧಾನದ ರಚನೆಯ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆಗಳು ಮೊಳಗಿ ಬಂದವು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು, ಅತಿಥಿಗಳು, ಅಂಬೇಡ್ಕರ್ ಗೀತೆ ಹೇಳುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.