ಗಾಳಿಬೀಡು, ಫೆ. ೫: ಮಡಿಕೇರಿ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ಇತ್ತೀಚೆಗೆ ೩೬ನೇ ಶಾಲಾ ವಾರ್ಷಿಕೋತ್ಸವ ನಡೆಯಿತು. ಕೆ. ನಿಡುಗಣೆ ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ, ಜಿಲ್ಲೆಯ ಹಿರಿಯ ಲೇಖಕ ಕಿಗ್ಗಾಲು ಗಿರೀಶ್, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಅರ್ಜುನ್ ಸಿಂಗ್ ಹಾಗೂ ನವೋದಯ ವಿದ್ಯಾಲಯದ ಪ್ರಾಚಾರ್ಯ ಪಿ.ಓ. ಪಂಕಜಾಕ್ಷನ್ ಅವರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಾಚಾರ್ಯ ಪಿ.ಓ. ಪಂಕಜಾಕ್ಷನ್ ಶೈಕ್ಷಣಿಕ ಸಾಲಿನಲ್ಲಿ ನಡೆದ ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮತ್ತು ವಿಶೇಷ ಸಾಧನೆಗಳ ವಿವರಗಳನ್ನೊಳಗೊಂಡ ವರದಿಯನ್ನು ಸಾದರಪಡಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ವಲಯ ಮಟ್ಟದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕಳೆದ ಸಾಲಿನಲ್ಲಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಉನ್ನತ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಗಳನ್ನು ಕೊಟ್ಟು ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಶಿಕ್ಷಣದಲ್ಲಿ ಕಲೆ ಎಂಬ ಪರಿಕಲ್ಪನೆಯನ್ನು ಆಧರಿಸಿ ಮತ್ತು ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಚಿತವಾದ ಕೊಡವ ನೃತ್ಯ ರೂಪಕವು ಪ್ರದರ್ಶಿತಗೊಂಡು ಉಪಸ್ಥಿತರಿದ್ದ ಗಣ್ಯರ, ವಿದ್ಯಾರ್ಥಿಗಳ, ಪಾಲಕ ವರ್ಗದವರ ಮೆಚ್ಚುಗೆಗಳಿಸಿತು. ಈ ನೃತ್ಯ ರೂಪಕಕ್ಕೆ ಒಂದು ತಿಂಗಳು ತರಬೇತಿ ನೀಡಿದ ನೃತ್ಯ ಕಲಾವಿದೆ ಮಿಲನ ಭರತ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಕಿಗ್ಗಾಲು ಗಿರೀಶ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯಪಾಲನೆಯ ಮಹತ್ವವೇನು ಎಂಬುದನ್ನು ವಿವರಿಸಿದರು.

ಡೀನ್ ಬೋಪಣ್ಣ ಹಾಗೂ ಅರ್ಜುನ್ ಸಿಂಗ್ ಅವರು ವಿದ್ಯಾರ್ಥಿಗಳಿಗೆ ಉನ್ನತ ಸಾಧನೆ ಮಾಡುವಂತೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿ.ಎಂ.ಸಿ. ಮತ್ತು ಪಿ.ಟಿ.ಸಿ. ಕಮಿಟಿಯ ಸದಸ್ಯರುಗಳು ಹಾಜರಿದ್ದರು.

ಉಪ ಪ್ರಾಚಾರ್ಯೆ ಸುಧಾ ಮಣಿ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.