ಮಡಿಕೇರಿ, ಫೆ. ೪: ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಳೆದ ತಾ.೮.೨.೨೦೨೦ರಂದು ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕಾಲೇಜು ರಸ್ತೆಯಲ್ಲಿರುವ ಗಣೇಶ್ ಮೆಡಿಕಲ್ ಶಾಪ್ನಲ್ಲಿ ಔಷಧಿ ಖರೀದಿಸುತ್ತಿದ್ದ ಜರೀನಾ ಎಂಬಾಕೆಗೆ ವೀರಾಜಪೇಟೆಯ ಹಾಲುಗುಂದ ಗ್ರಾಮದ ಆರೋಪಿ ಬಿಲ್ಲವರ ಸೋಮಪ್ಪ (ಹರೀಶ್) ನಿಂದಿಸುತ್ತಿದ್ದ ಸಂದರ್ಭ ರಾಶಿಕ್ ಎಂಬಾತ ವಿಚಾರಿಸಿದಾಗ ಸೋಮಪ್ಪ ಚಾಕುವಿನಿಂದ ರಾಶಿಕ್ನ ಹೊಟ್ಟೆಯ ಭಾಗಕ್ಕೆ ಚುಚ್ಚಿ ಗಾಯವುಂಟು ಮಾಡಿದ್ದ. ಈ ಬಗ್ಗೆ ದೊರೆತ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂದಿನ ಪೊಲೀಸ್ ಉಪ ನಿರೀಕ್ಷಕ ಎಂ.ಕೆ. ಸದಾಶಿವ ಅವರು ತನಿಖೆ ನಡೆಸಿ ಆರೋಪಿತನ ವಿರುದ್ಧ ಕೊಲೆ ಯತ್ನದ ಅಪರಾಧಕ್ಕಾಗಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಭೃಂಗೇಶ್ ಎಂ. ಅವರು ಆರೋಪಿತನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ ೩ ವರ್ಷಗಳ ಶಿಕ್ಷೆ ಹಾಗೂ ರೂ.೧೦,೦೦೦ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಸಾದಾ ಸಜೆಯನ್ನು ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. ವಸೂಲಾಗುವ ದಂಡದ ಹಣ ರೂ.೧೦,೦೦೦ವನ್ನು ಗಾಯಾಳು ರಾಶಿಕ್ಗೆ ನೀಡುವಂತೆ ಆದೇಶಿಸಿರುತ್ತಾರೆ. ಸರಕಾರದ ಪರ ಸರ್ಕಾರಿ ಅಭಿಯೋಜಕಿ ಅಶ್ವಿನಿ ಕೆ.ಜಿ. ವಾದ ಮಂಡಿಸಿದರು.