ಸಿದ್ದಾಪುರ, ಫೆ. ೫: ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸಬೇಕು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಿ, ತಮ್ಮ ಪೋಷಕರಿಗೆ ಹೆಸರು ತರುವಂತಾಗಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.
ಸಿದ್ದಾಪುರದ ಬಿ.ಜಿ.ಎಸ್ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆ ಅತ್ಯಂತ ದೊಡ್ಡ ಸಂಪತ್ತು. ಬಡವ ಬಲ್ಲಿದ ಎಂಬುದನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು. ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಪೋಷಕರಿಗೆ ಒಳ್ಳೆಯ ಹೆಸರು ತರಲು ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಡಬೇಕು ಎಂದರು. ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಸಿದ್ದಾಪುರ ಭಾಗದಲ್ಲಿ ಬಿ.ಜಿ.ಎಸ್ ಶಾಲೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿದ್ದಾಪುರ ಭಾಗದಲ್ಲಿ ತೋಟ ಕಾರ್ಮಿಕರು ಹೆಚ್ಚಾಗಿದ್ದು, ಬಿ.ಜಿಎಸ್ ಶಾಲೆಯ ಮುಖಾಂತರ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದರು. ಶಾಲೆಯ ಅಭಿವೃದ್ಧಿಗೆ ಮುಂದಿನ ಬಜೆಟ್ನಲ್ಲಿ ಅನುದಾನ ಕಲ್ಪಿಸಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಡಿ.ವೈ.ಎಸ್.ಪಿ ಗಜೇಂದ್ರ ಕುಮಾರ್, ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ, ಸಂಸ್ಥೆಯ ಆಡಳಿತ ಅಧಿಕಾರಿ ಶಿವರಾಮ್ ಸೇರಿದಂತೆ ಇನ್ನಿತರರು ಇದ್ದರು. ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ವಿವಿಧ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಬಗೆಗಿನ ನೃತ್ಯ ನೋಡುಗರಲ್ಲಿ ದೇಶಪ್ರೇಮ ಹೆಚ್ಚಿಸಿತು.