ಸೋಮವಾರಪೇಟೆ, ಫೆ. ೪: ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ದೇವಾಲಯ ಹಾಗೂ ವಿದ್ಯಾಲಯಗಳು ಅಡಿಪಾಯವಾಗಿವೆ. ಧಾರ್ಮಿಕತೆಯೊಂದಿಗೆ ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ತಾಲೂಕಿನ ಯಲಕನೂರು-ಕಾಟಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ರೂ. ೫೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಶಾಸಕರು ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲಿ ದೇವಾಲಯ ನಿರ್ಮಾಣಕ್ಕೆ ಸರ್ಕಾರವೂ ಸಹ ಅನುದಾನ ಒದಗಿಸುತ್ತಿದೆ. ಇದರೊಂದಿಗೆ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೂ ಆರ್ಥಿಕ ಸೌಕರ್ಯ ಕಲ್ಪಿಸುತ್ತಿದೆ. ದೇವಾಲಯಗಳು ಧಾರ್ಮಿಕ ಪ್ರಜ್ಞೆಗೆ ಕಾರಣವಾದರೆ ವಿದ್ಯಾಲಯಗಳು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ದೇವಾಲಯಗಳ ನಿರ್ಮಾಣ ಪುಣ್ಯದ ಕಾರ್ಯವೂ ಆಗಿದೆ ಎಂದರು.

ಕಾಟಿಕೊಪ್ಪಲು ಶ್ರೀ ಚಾಮುಮಡೇಶ್ವರಿ ದೇವಾಲಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ೫ ಲಕ್ಷ ಅನುದಾನ ನೀಡಲಾಗುವುದು ಎಂದ ರಂಜನ್, ಈಗಾಗಲೇ ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿಗೆ ೫ ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೊಂದಿಗೆ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತೀಯತೆಯೇ ದೇವಾಲಯಗಳ ಸಂಸ್ಕೃತಿಯಾಗಿದೆ. ಭಕ್ತಿ ಭಾವಗಳ ಸಂಗಮ ಕ್ಷೇತ್ರಗಳಿಂದ ಧಾರ್ಮಿಕತೆಯ ಸಂಸ್ಕಾರ ಮೂಡುತ್ತವೆ. ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ದೇವಾಲಯಗಳು ಸಹಕಾರಿಯಾಗಿವೆ ಎಂದರು.

ಧಾರ್ಮಿಕತೆಯ ಮಹತ್ವ ಮತ್ತು ಯೋಗವನ್ನು ಭಾರತವು ಪ್ರಪಂಚಕ್ಕೆ ಪ್ರಚುರಪಡಿಸಿದೆ ಎಂದ ಸ್ವಾಮೀಜಿಗಳು, ದೇವಾಲಯಗಳ ನಿರ್ಮಾಣದಿಂದ ಗ್ರಾಮದಲ್ಲಿ ಸಾಮರಸ್ಯ ವೃದ್ಧಿಸುತ್ತದೆ. ಆತ್ಮಶುದ್ಧಿಯಿಂದ ಜೀವನ ನಡೆಸಿದರೆ ಧರ್ಮಶ್ರದ್ಧೆಯುಳ್ಳ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.

ದಿಂಡುಗಾಡು ಮಠಾಧೀಶರಾದ ಶ್ರೀಅಪ್ಪಾಜಿ ಸ್ವಾಮೀಜಿ ಮಾತನಾಡಿ, ಮನೋಲ್ಲಾಸ ಮತ್ತು ಆತ್ಮಸಾಕ್ಷಾತ್ಕಾರಕ್ಕೆ ದೇವಾಲಯಗಳು ಕಾರಣೀಭೂತವಾಗಿವೆ. ಹುಟ್ಟು-ಸಾವಿನ ನಡುವೆ ಇರುವ ಜೀವನದಲ್ಲಿ ಪುಣ್ಯಕಾರ್ಯಗಳಿಗೆ ಆದ್ಯತೆ ನೀಡಿದರೆ ಮಾನವನ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಹೆಚ್ಚಿನ ನೆರವು ಒದಗಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿ ಮುತ್ತಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ಕಳೆದ ತಾ. ೨ ರಿಂದ ಆರಂಭಗೊAಡ ಶ್ರೀ ಚಾಮುಂಡೇಶ್ವರಿ, ಶ್ರೀಗಣಪತಿ, ಶ್ರೀ ನಾಗದೇವತೆ ದೇವಾಲಯ ಲೋಕಾರ್ಪಣೆ ಮತ್ತು ಪ್ರತಿಷ್ಠಾಪನಾ ಕಾರ್ಯದಲ್ಲಿ ಕುಶಾಲನಗರದ ಶ್ರೀಸುಬ್ರಮಣ್ಯ ಭಟ್ ಮತ್ತು ಶ್ರೀಗಿರೀಶ್ ಭಟ್ ಪೌರೋಹಿತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪುಣ್ಯಾಃ, ಯೋಗ ಶಾಲಾ ಪ್ರವೇಶ, ಅಂಕುರಾರ್ಪಣೆ, ಕಂಕಣ ಬಂಧನ, ಅದಿವಾಸ ಪೂಜೆ, ಅದಿವಾಸ ಹೋಮ, ವಾಸ್ತು ರಾಕ್ಷೆÆÃಜ್ಞ, ಅಷ್ಟದಿಗ್ಬಲಿ, ಅಷ್ಟಬಂಧ, ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆ, ಪ್ರತಿಷ್ಠಾ ಹೋಮ, ಕಲಾತತ್ವ ಹೋಮ, ಕಲಶಾಭಿಷೇಕ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಮಹಾಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು.

ನಂತರ ಸುಳ್ಯದ ದುರ್ಗಾಪರಮೇಶ್ವರಿ ದೇವಾಲಯ ತಂಡದಿAದ ಭಜನೆ, ಮೈಸೂರಿನ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಬಸವರಾಜು ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.