ಕುಶಾಲನಗರ, ಫೆ. ೪: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ರೂ. ೨೦೦ ಕೋಟಿ ವೆಚ್ಚದಲ್ಲಿ ಕಳೆದ ೫ ವರ್ಷಗಳಿಂದ ಬಿಜೆಪಿ ಮೂಲಕ ನಡೆದÀ ಅಭಿವೃದ್ಧಿ ಬಗೆಗಿನ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಿಡುಗಡೆಗೊಳಿಸಿದರು.
ಪುರಸಭೆ ಯೋಜನೆಗಳು, ನೂತನ ಅಂಗಡಿ ಮಳಿಗೆ ನಿರ್ಮಾಣ, ಸ್ವಚ್ಛ ಭಾರತ್ ಯೋಜನೆ, ನೂತನ ರಸ್ತೆ ನಿರ್ಮಾಣ ಕಾಮಗಾರಿ, ಅಂಬೇಡ್ಕರ್ ಭವನ ನಿರ್ಮಾಣ, ಗುಂಡೂರಾವ್ ಬಡಾವಣೆಯಲ್ಲಿ ವಿವಿಧ ಯೋಜನೆಗಳಿಗೆ ಸ್ಥಳ ಮೀಸಲು ಸೇರಿದಂತೆ ವೈಯಕ್ತಿಕ ಸವಲತ್ತು ವಿತರಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟಿನ ದೀಪಾಲಂಕಾರ, ಹಾರಂಗಿ ಬಳಿ ಸಾಕಾನೆ ಶಿಬಿರ ಸ್ಥಾಪನೆ, ಕಾವೇರಿ ನದಿ ನೆರೆ ಸಂತ್ರಸ್ತ ಪ್ರದೇಶಗಳನ್ನು ಪ್ರವಾಹ ಮುಕ್ತವನ್ನಾಗಿಸಲು ಯೋಜನೆ, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಮುಳ್ಳುಸೋಗೆ ಕಂದಾಯ ಗ್ರಾಮ ಮತ್ತು ಮಾದಪಟ್ಟಣ ಗ್ರಾಮದ ಭಾಗಗಳನ್ನು ಸೇರಿಸಿ ಪುರಸಭೆ ಯನ್ನಾಗಿ ಮೇಲ್ದರ್ಜೆ ಗೇರಿಸಿರುವುದು. ನೀರು ಸರಬರಾಜು, ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವ ಬೃಹತ್ ಯೋಜನೆಗಳ ಬಗ್ಗೆ ಕೈಪಿಡಿಯಲ್ಲಿ ಮಾಹಿತಿಯನ್ನು ಒದಗಿಸಲಾಗಿದೆ.
ಕೇಂದ್ರ-ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಮೂಲಕ ಈ ಎಲ್ಲಾ ಅಭಿವೃದ್ಧಿ ಕೆಲಸಗÀಳು ನಡೆದಿವೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಈ ಸಂದರ್ಭ ಮಾತನಾಡಿದ ಪುರಸಭೆ ಅಧ್ಯಕ್ಷ ಜಯವರ್ಧನ್, ಪಟ್ಟಣ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಅನುದಾನ ನೀಡುವ ಮೂಲಕ ಶಾಸಕರು ಶೈಕ್ಷಣಿಕ ಕೇಂದ್ರಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರುವುದಾಗಿ ಹೇಳಿದರು. ಪಟ್ಟಣದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಶಾಸಕ ರಂಜನ್ ಅವರ ಕಾಳಜಿ ಅತ್ಯಮೂಲ್ಯವಾಗಿದೆ ಎಂದರು. ಪ್ರಸಕ್ತ ಅಂದಾಜು ರೂ. ೫ ಕೋಟಿ ವೆಚ್ಚದಲ್ಲಿ ಪುರಸಭೆಯ ಸುಸಜ್ಜಿತ ವಾಣಿಜ್ಯ ಸಂಕೀರ್ಣದ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಬಿಜೆಪಿ ವಕ್ತಾರ ಕೆ.ಜಿ. ಮನು, ಪುರಸಭೆ ಸದಸ್ಯ ಅಮೃತ್ರಾಜ್, ಪ್ರಮುಖರಾದ ಶಿವಾಜಿ, ಎಂ.ಎನ್. ಕುಮಾರಪ್ಪ, ಪ್ರವೀಣ್, ವೈಶಾಖ್, ಎಂ.ವಿ. ನಾರಾಯಣ್, ಗೌತಮ್, ಹೇರೂರು ಚಂದ್ರಶೇಖರ್, ಸುಮಂತ್, ಪೃಥ್ವಿರಾಜ್ ಮತ್ತಿತರರು ಇದ್ದರು.