ಮಡಿಕೇರಿ, ಫೆ. ೪: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಫಿ ಕೊಯ್ಲು ಪೂರ್ಣಗೊಂಡಿದ್ದು, ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕರಿಮೆಣಸು ಕೊಯ್ಲು ಪ್ರಾರಂಭಗೊAಡಿದೆ.

ಕರಿಮೆಣಸು ಫಸಲು ಕೊಯ್ಲು ಮಾಡಲು, ಜಿಲ್ಲೆಯಲ್ಲಿ ಅಲ್ಯುಮಿನಿಯಂ ಏಣಿ ಹಾಗೂ ಕಬ್ಬಿಣದ ಏಣಿಯನ್ನು ಬಳಸುತ್ತಿದ್ದು, ಕರಿಮೆಣಸು ಕೊಯ್ಲು ಮಾಡುವ ಸಂದರ್ಭದಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ೩೦ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಾಫಿ ತೋಟದಲ್ಲಿ ಮರಗಳಲ್ಲಿ ಹಬ್ಬಿಸಲಾಗಿರುವ ಕಾಳುಮೆಣಸು ಕೊಯ್ಲು ಮಾಡಲು ಏಣಿಗಳನ್ನು ಬಳಸುವುದು ಅನಿವಾರ್ಯವಾಗಿದೆ. ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿ ಬಳಸುತ್ತಿದ್ದರು. ಆದರೆ ಕಾಲ ಕ್ರಮೇಣ ಬಿದಿರಿಗೆ ಕಟ್ಟೆ ರೋಗ ಬಾಧಿಸಿ ಜಿಲ್ಲೆಯಲ್ಲಿ ಬಿದಿರು ನಾಶವಾಗಿದೆ. ಹೊಸ ಆವಿಷ್ಕಾರ ಹಾಗೂ ಆಧುನಿಕತೆಯ ಪರಿಣಾಮ ಅಲ್ಯುಮಿನಿಯಮ್ ಹಾಗೂ ಕಬ್ಬಿಣದ ಏಣಿಗಳನ್ನು ಬಳಸಲಾಗುತ್ತಿದೆ.

ಇದರ ಪರಿಣಾಮ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಏನೂ ಅರಿಯದ ಕಾರ್ಮಿಕರು ಜೀವ ಕಳೆದು ಕೊಳ್ಳುತ್ತಿದ್ದಾರೆ. ಅಲ್ಯುಮಿನಿಯಂ ಹಾಗೂ ಕಬ್ಬಿಣದ ಏಣಿಗಳನ್ನು ನಿಷೇಧಿಸಬೇಕೆಂಬ ಕೂಗು ಜಿಲ್ಲೆಯಲ್ಲಿ ಕೇಳಿಬರುತ್ತಿದ್ದರೂ ಸಹಾ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಜೀವನೋಪಾಯಕ್ಕಾಗಿ ಕೊಡಗಿಗೆ ಬಂದ ಕಾರ್ಮಿಕರೇ ಹೆಚ್ಚು ಬಲಿ

ಜಿಲ್ಲೆಯ ಬಹುತೇಕ ತೋಟದ ಕೆಲ ಭಾಗದಲ್ಲೇ ಹಾಗೂ ರಸ್ತೆಯ ಬದಿಯಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಕೊಡಗಿನಲ್ಲಿ ಇತ್ತೀಚಿನ ವರ್ಷದಲ್ಲಿ ಕರಿಮೆಣಸು ಕೊಯ್ಲು, ಮರ ಕಪಾತ್ ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಅಲ್ಯುಮಿನಿಯಂ, ಕಬ್ಬಿಣ ಏಣಿಗಳನ್ನು ಬಳಸುವುದು ಹೆಚ್ಚಳವಾಗಿದೆ.

ಕರಿಮೆಣಸು ಕೊಯ್ಲು ಮಾಡಲು, ಏಣಿಗಳನ್ನು ಎತ್ತಿ ತೋಟದಲ್ಲಿ ಸಾಗುವಾಗ ಏನೂ ಅರಿಯದ ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಬಲಿಯಾಗಿದ್ದಾರೆ.

ಇದರಲ್ಲಿ ಜೀವನೋಪಾಯಕ್ಕಾಗಿ ಕೊಡಗಿಗೆ ಬಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಬಡ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ಥಳೀಯ ಕೂಲಿ ಕಾರ್ಮಿಕರಿಗೆ

(ಮೊದಲ ಪುಟದಿಂದ) ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಇರುತ್ತದೆ.

ಆದರೆ ಜಿಲ್ಲೆಯ ಬಹುತೇಕ ತೋಟಗಳಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿರುವುದು ಅಸ್ಸಾಂ, ತಮಿಳುನಾಡು ಹಾಗೂ ಉತ್ತರ ಕರ್ನಾಟಕದ ಭಾಗದ ಕಾರ್ಮಿಕರಾಗಿದ್ದಾರೆ.

ಇವರಿಗೆ ವಿದ್ಯುತ್ ತಂತಿ ಹಾದು ಹೋಗಿರುವ ಮಾಹಿತಿ ಇರುವುದಿಲ್ಲ. ಇದರ ಬಗ್ಗೆ ತೋಟದ ಮಾಲೀಕರು ಕೂಡ ನಿರ್ಲಕ್ಷ ವಹಿಸಿರುವುದು, ಏಣಿಗಳಿಗೆ ವಿದ್ಯುತ್ ತಗುಲಿ ಕಾರ್ಮಿಕರು ಸಾವನ್ನಪ್ಪಲು ಕಾರಣವಾಗಿದೆ.

ಈ ರೀತಿಯ ವಿದ್ಯುತ್ ಅಪಘಾತವನ್ನು ತಡೆಗಟ್ಟಲು ಸರ್ಕಾರ ಮುಂದಾಗಬೇಕಾಗಿದೆ. ಅದಲ್ಲದೇ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಏಣಿಗಳನ್ನು ಸಂಪೂರ್ಣ ನಿಷೇಧಿಸಿ, ಬಿದಿರು ಹಾಗೂ ಫೈಬರ್ ಏಣಿಗಳನ್ನು ಬಳಸಿ ಕಾರ್ಮಿಕರ ಪ್ರಾಣವನ್ನು ಉಳಿಸಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ ಜಿಲ್ಲೆಯಲ್ಲಿ ಈಗಾಗಲೇ ಕಾಳುಮೆಣಸು ಕೊಯ್ಲು ಅಲ್ಯುಮಿನಿಯಂ ಏಣಿ ಬಳಕೆಯಿಂದ ಹಲವಾರು ಕಾರ್ಮಿಕರು ಬಲಿಯಾಗಿದ್ದಾರೆ. ವಿದ್ಯುತ್ ಕ್ರಹಿಸದ ಆಗೇ ಇರುವ ಏಣಿಯನ್ನು ಆಧುನೀಕರಿಸಬೇಕು. ಇದರ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಯುಮಿನಿಯಂ ಏಣಿಯಿಂದ ಮೆಣಸು ಕೊಯ್ಲು ಕಾರ್ಯ ಸುಲಭವೆಂದು ಎಲ್ಲರೂ ಅದನ್ನೇ ಬಳಸುತ್ತಾರೆ. ಇದರಿಂದ ಅಷ್ಟೇ ಅಪಾಯ ಕೂಡ ಇದೆ.ಇದನ್ನು ಚೆಸ್ಕಾಂ ಇಲಾಖೆಯವರು ಗಂಭೀರವಾಗಿ ಪರಿಗಣಿಸಿ ತೋಟದೊಳಗೆ ಮೊಲ್ಡಿಂಗ್ ವಿದ್ಯುತ್ ತಂತಿಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ತೋಟದಲ್ಲಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ರೈತರ ಮತ್ತು ಕಾರ್ಮಿಕರ ಜೀವ ಉಳಿಸಲು ಕ್ರಮ ಕೈಗೊಳ್ಳಬೇಕು.

- ಕರವಂಡ ಅಪ್ಪಣ್ಣ, ಬೆಳೆಗಾರರು ದೊಡ್ಡಪುಲಿಕೋಟು ಗ್ರಾಮ ಕಳೆದ ಕೆಲವು ವರ್ಷಗಳ ಹಿಂದೆ ಕಾಳುಮೆಣಸು ಕೊಯ್ಲು ಕಾರ್ಯಕ್ಕೆ ಬಿದಿರಿನ ಏಣಿ ಬಳಸುತ್ತಿದ್ದೆವು. ಆಗ ಯಾವುದೇ ಅಪಾಯ ಇರಲಿಲ್ಲ. ಇತ್ತೀಚೆಗೆ ಎಲ್ಲಾ ತೋಟದ ಮಾಲೀಕರು ನಮಗೆ ಕಾಳುಮೆಣಸು ಕೊಯ್ಲು ಮಾಡಲು ಅಲ್ಯುಮಿನಿಯಂ ಏಣಿಯನ್ನೇ ನೀಡುತ್ತಾರೆ. ಎಷ್ಟೇ ಎಚ್ಚರ ವಹಿಸಿದರು ಕೆಲಸದ ಭರದಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸುತ್ತದೆ. ಅಲ್ಲದೆ ತೋಟದೊಳಗೆ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿರೋದು ನಮಗೆ ಕಂಠಕವಾಗಿದೆ. ಯಾವುದೇ ಕಾರಣಕ್ಕೂ ತೋಟದೊಳಗೆ ವಿದ್ಯುತ್ ತಂತಿಗಳು ಹಾದು ಹೋಗದಂತೆ ಚೆಸ್ಕಾಂ ಇಲಾಖೆಯವರು ಕ್ರಮವಹಿಸಬೇಕು.

-ಬಿ.ಬಿ. ಅಣ್ಣಪ್ಪ, ಕಾರ್ಮಿಕ, ನಾಪೋಕ್ಲು