ಮಡಿಕೇರಿ, ಫೆ. ೪: ವಿಶ್ವದಲ್ಲಿ ಅಪಘಾತದಿಂದ ಹೆಚ್ಚಿನ ಸಾವು-ನೋವುಗಳು ಕಂಡುಬರುತ್ತಿವೆ. ಹಾಗೆಯೇ ಕ್ಯಾನ್ಸರ್ ರೋಗದಿಂದ ಹೆಚ್ಚಿನ ಜನರು ಮೃತಪಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ರೋಗ ಬಾರದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅತಿಯಾದರೆ ಅಮೃತವು ವಿಷ ಎಂಬುದನ್ನು ಮರೆಯಬಾರದು. ಕ್ಯಾನ್ಸರ್‌ನಿಂದ ಸಂಭವಿಸುವ ಅಪಾಯವನ್ನು ಕಡಿಮೆ ಮಾಡಲು ಆರೋಗ್ಯಕರ ಜೀವನ ಶೈಲಿ ಮತ್ತು ವಯಸ್ಸಿಗೆ ತಕ್ಕಂತೆ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ರಕ್ತದ ಮೂಲಕ ಕ್ಯಾನ್ಸರ್ ಬೇಗ ಹರಡುತ್ತದೆ. ಪ್ರತಿ ನಿತ್ಯ ವ್ಯಾಯಾಮ, ಯೋಗ ಮಾಡಬೇಕು. ದೇಹಕ್ಕೆ ಆಯಾಸ ಆಗುವ ರೀತಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಸ್ಪತ್ರೆಯ ಶಸ್ತç ಚಿಕಿತ್ಸಕ ವಿಭಾಗದ ಮುಖ್ಯಸ್ಥ ಡಾ. ನಂಜುAಡಯ್ಯ ಮಾತನಾಡಿ, ಕ್ಯಾನ್ಸರ್ ಎಂದ ಕೂಡಲೇ ಭಯಪಡಬಾರದು. ಯಾವುದೇ ರೋಗಕ್ಕೂ ಸಹ ಔಷಧ ಇರುತ್ತದೆ. ಆದರೆ ಆರಂಭದಲ್ಲಿಯೇ ಗುಣಪಡಿಸಿಕೊಳ್ಳಲು ಮುಂದಾಗ ಬೇಕು.

ಕಲುಷಿತ ನೀರು, ಕಲುಷಿತ ಆಹಾರ, ಕಲುಷಿತ ಪರಿಸರದಿಂದ ನಾನಾ ರೋಗಗಳು ಬರಲಿದ್ದು, ಈ ಬಗ್ಗೆ ತುಂಬಾ ಎಚ್ಚರವಹಿಸಬೇಕು ಎಂದು ಹೇಳಿದರು.

ಕ್ಯಾನ್ಸರ್ ಬಗ್ಗೆ ಜನ ಸಾಮಾನ್ಯರಲ್ಲಿ ಇರಬಹುದಾದ ಭಯ ಮತ್ತು ಪೂರ್ವಾಗ್ರಹವನ್ನು ಹೋಗಲಾಡಿಸಲು ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮಾರಕ ರೋಗದ ವಿರುದ್ಧ ಹೋರಾಡಲು ಏಕೈಕ ಮಾರ್ಗವೆಂದರೆ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬAಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಆವರಣದಿಂದ ನಮ್ಮ ದನಿಗಳನ್ನು ಕೂಡಿಸೋಣ ಮತ್ತು ಕ್ರಮ ಕೈಗೊಳ್ಳೋಣ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಚಾಲನೆ ನೀಡಿದರು.

ಜಾಥಾವು ಜಿಲ್ಲಾಡಳಿತ ಭವನದಿಂದ ಮಂಗೇರಿರ ಮುತ್ತಣ್ಣ, ಜನರಲ್ ತಿಮ್ಮಯ್ಯ ವೃತ್ತ ಮಾರ್ಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಗೊಂಡಿತು. ಜಾಥಾದಲ್ಲಿ ಕ್ಯಾನ್ಸರ್ ಕುರಿತು ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಕಳ್ಳಿಚಂಡ ಕಾರ್ಯಪ್ಪ, ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.