ಮಡಿಕೇರಿ, ಫೆ. ೪: ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದಿಂದ ಅಂತರ ದಕ್ಷಿಣ ವಲಯದ ಬಾಲಕಿಯರ ಹಾಕಿ ಪಂದ್ಯಾವಳಿ ತಾ. ೭ ಮತ್ತು ೮ ರಂದು ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ. ಕೇರಳದ ಕೊಲ್ಲಂ, ಹೈದರಾಬಾದ್ ಮತ್ತು ಮಡಿಕೇರಿಯ ಕ್ರೀಡಾ ಪ್ರಾಧಿಕಾರದ ಹಾಕಿ ತಂಡಗಳು ಪಾಲ್ಗೊಳ್ಳಲಿವೆ. ತಾ. ೭ ರಂದು ಮಧ್ಯಾಹ್ನ ೩ ಗಂಟೆಗೆ ಬಾಲಕಿಯರ ಹಾಕಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಷ್ಮಯಿ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಹಾಗೆಯೇ ತಾ. ೮ ರಂದು ಸಂಜೆ ೫ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದ ಮೇಲ್ವಿಚಾರಕ ಮಿನಿ ಉಣ್ಣಿರಾಜ್ ತಿಳಿಸಿದ್ದಾರೆ.