ಪೊನ್ನಂಪೇಟೆ, ಫೆ. ೨: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ಪುಟ್ಟಂಗಡ ಚೇತನ್ ಎಂಬವರ ಹಸು ಹುಲಿದಾಳಿಗೆ ಬಲಿಯಾಗಿದೆ. ಕಳೆದ ವರ್ಷ ಕೂಡ ಇದೇ ಸಮಯದಲ್ಲಿ ಚೇತನ್ ಅವರ ಹಸು ಹುಲಿ ದಾಳಿಗೆ ಪ್ರಾಣ ಕಳೆದುಕೊಂಡಿತ್ತು. ಮತ್ತೆ ಹುಲಿಯ ಕಾಟದಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ ೧೫ ದಿನಗಳ ಹಿಂದೆ ಇಲ್ಲಿಗೆ ಸಮೀಪದ ಬಲ್ಯಮುಂಡೂರು ಗ್ರಾಮದ ಚೇಂದಿರ ಸುರೇಶ ಎಂಬವರ ಎಮ್ಮೆಯನ್ನು ಹುಲಿ ಕೊಂದು ಹಾಕಿತ್ತು. ಮತ್ತೆ ಈ ಭಾಗದಲ್ಲಿ ಹುಲಿಯ ಸಂಚಾರ ಮುಂದುವರೆದಿರುವ ಕಾರಣ ಭಯದಿಂದ ಕಾಫಿ ತೋಟಗಳಿಗೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಮೋರ್ಚ ತಾಲೂಕು ಕಾರ್ಯದರ್ಶಿ ಕೊಟ್ಟಂಗಡ ಅಯ್ಯಪ್ಪ ಅವರು ಸಿಸಿಎಫ್ ಮೂರ್ತಿ ಹಾಗೂ ಡಿಎಫ್‌ಓ ಶರಣಬಸಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಹುಲಿ ಸೆರೆಗೆ ಇಂದೇ ಬೋನ್ ಇಡುವಂತೆ ಒತ್ತಾಯಿಸಿದ ಮೇರೆಗೆ ಡಿಆರ್ ಎಫ್‌ಓ ದಿವಾಕರ್ ಅವರು ಸಿಬ್ಬಂದಿಗಳೊAದಿಗೆ ತೆರಳಿ ಬೋನು ಇಟ್ಟು, ಕ್ಯಾಮರಾ ಅಳವಡಿಸಿದ್ದಾರೆ. ಕೃಷಿ ಮೋರ್ಚಾ ತಾಲೂಕು ಅಧ್ಯಕ್ಷ ಕಟ್ಟೆರ ಈಶ್ವರ, ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಅಡ್ಡಂಡ ನಿಲನ್ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಹಾಗೂ ಹಸು ಕಳೆದು ಕೊಂಡವರಿಗೆ ತಕ್ಷಣವೇ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಪುಟ್ಟಂಗಡ ಮಧು, ಪೆಮ್ಮಂಡ ದಿಲನ್, ಕೊಟ್ಟಂಗಡ ಸದಾಶಿವ, ಹಾಗೂ ಸ್ಥಳೀಯ ರೈತರು ಹಾಜರಿದ್ದರು.