ಮಡಿಕೇರಿ, ಫೆ. ೨: ತಾ. ೩ ರಿಂದ (ಇಂದಿನಿAದ) ೬ರ ತನಕ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ನಗರದ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ವೈನ್ ಮೇಳ ನಡೆಯಲಿದೆ.

ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕೆ ಇಲಾಖೆ ಸಹಯೋಗ ದೊಂದಿಗೆ ಮಡಿಕೇರಿಯ ರಾಜಾ ಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಕಾರ್ಯ ಕ್ರಮದ ಅಂಗವಾಗಿ ೧೦ ರಿಂದ ೧೨ ಸಾವಿರ ಸಂಖ್ಯೆಯ ಪೇಟೊನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಫ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಸೇರಿದಂತೆ ೨೦ ಜಾತಿಯ ಹೂಗಳನ್ನು ರಾಜಾಸೀಟ್ ಉದ್ಯಾನದಲ್ಲಿ ಪಾತಿ ಹಾಗೂ ಕುಂಡಗಳಲ್ಲಿ ನೆಡಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ಹೂವಿನಿಂದ ಮಾಡಿದ ಕಲಾಕೃತಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿವೆ. ರಾಜರ ಕಾಲದ ನಾಲ್ಕು ನಾಡು ಅರಮನೆಯ ಕಲಾಕೃತಿಯನ್ನು ೧೮ ಅಡಿ ಎತ್ತರ, ೧೩ ಅಡಿ ಉದ್ದ, ೩೫ ಅಡಿ ಅಗಲದಲ್ಲಿ ವಿವಿಧ ಬಗೆಯ ಹೂಗಳಿಂದ ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಮತದಾನದ ಅರಿವು ಮೂಡಿಸಲು ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಮಾದರಿಯನ್ನು ಬಣ್ಣಬಣ್ಣದ ಹೂವಿನಿಂದ ರಚಿಸಲಾಗುತ್ತದೆ.

ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯನ್ನು ಪ್ರತಿಬಿಂಬಿಸಲು ಕಾಫಿ ಕಪ್ ಹಾಗೂ ಸಾಸರ್ ಮಾದರಿ, ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಸೈಡರ್ ಮೆನ್, ಮಾಶ ಆ್ಯಂಡ್ ಬೇರ್ ಸೇರಿದಂತೆ ಇನ್ನಿತರ ಕಾರ್ಟೂನ್ ಪಾತ್ರಗಳನ್ನು ಹೂವಿನಿಂದ ಸೃಷ್ಟಿಸಲಾಗುತ್ತಿದೆ. ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ ಹಾಗೂ ಹಣ್ಣುಗಳನ್ನು ಕೆತ್ತನೆ ಮಾಡಿ ಪ್ರದರ್ಶಿಸಲಾಗುತ್ತದೆ. ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಇಕೆಬಾನೆ ಜೋಡಣೆ ಹಾಗೂ ಆ್ಯಂಥೋರಿಯA ಹೂವಿನ ಪ್ರದರ್ಶನವೂ ನಡೆಯಲಿದೆ.

ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಹೂ ಜೋಡಣೆ, ರಂಗೋಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ತಾ. ೩ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ರಾಜಾಸೀಟ್ ಉದ್ಯಾನಕ್ಕೆ ಬಂದು ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಇದೇ ಸಂದರ್ಭ ಕರ್ನಾಟಕ ದ್ರಾಕ್ಷಿ ರಸ ಮಂಡಳಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗಾಂಧಿ ಮೈದಾನದಲ್ಲಿ ವೈನ್ ಉತ್ಸವ ನಡೆಯಲಿದೆ. ಹೋಂ ಮೇಡ್ ವೈನ್, ವೈನ್ ಬೋರ್ಡ್ ವತಿಯಿಂದ ಬ್ರಾಂಡ್ ವೈನ್‌ಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ‘ಟೆಸ್ಟಿಂಗ್ ಹಾಗೂ ಟೇಸ್ಟಿಂಗ್’ ವ್ಯವಸ್ಥೆ ಇರಲಿದೆ..

ಸಂಜೆ ೪ ಗಂಟೆಗೆ ಫಲಪುಷ್ಪ ಪ್ರದರ್ಶನವನ್ನು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಮಳಿಗೆಯನ್ನು ತೋಟಗಾರಿಕೆ ಸಚಿವ ಮುನಿರತ್ನ ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಸಂಸದ ಪ್ರತಾಪ್ ಸಿಂಹ, ಜೀವ ವೈವಿಧ್ಯ ಮಂಡಳಿ ರಾಜ್ಯಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೊಡಗು ಜಿ.ಪಂ. ಆಡಳಿತಾಧಿಕಾರಿ ಅನ್ಬುಕುಮಾರ್, ತೋಟಗಾರಿಕೆ ಇಲಾಖೆ ರಾಜ್ಯ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.