ಕೂಡಿಗೆ, ಫೆ. ೨: ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ, ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮ ಸದ್ಗುರು ಅಪ್ಪಯ್ಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ.ಎಸ್. ಪುನಿತ್ ಕುಮಾರ್, ಶಕ್ತಿಧಾಮದ ಯೋಜನಾ ನಿರ್ದೇಶಕ ಕೆ.ಓ. ಪ್ರಭು, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಬಿ. ಅಂಜನಾದೇವಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸಿ. ದುರ್ಗೇಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರುಗಳಾದ ರಾಬಿನ್, ನಟರಾಜ್ ಲೋಕೇಶ್, ಕೂಡಿಗೆ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಕೂಡಿಗೆ ಶಕ್ತಿ ವೃದ್ಧಾಶ್ರಮ ಕೇಂದ್ರದ ವ್ಯವಸ್ಥಾಪಕ ಚಂದ್ರು ಸೇರಿದಂತೆ ಶಾಲೆ ಶಿಕ್ಷಕರ ವೃಂದ ಹಾಜರಿದ್ದರು.

ಸ್ನಾತಕೋತ್ತರ ಪದವಿ ಕೇಂದ್ರದ ಸಮಾಜಕಾರ್ಯ ಅಧ್ಯಯನ ವಿಭಾಗ ಪ್ರಶಿಕ್ಷಣಾರ್ಥಿ ಪುಪ್ಪಕ್ ಕುಮಾರ್ ಸ್ವಾಗತಿಸಿ, ಕೆ.ಎಸ್. ಜನನಿ ವಂದಿಸಿದರು.