ಸೋಮವಾರಪೇಟೆ, ಫೆ. ೨: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಪ್ರಶಸ್ತಿ ಪ್ರದಾನ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ಯುವಶಕ್ತಿ ಬಲಿಷ್ಠವಾಗಿದ್ದಲ್ಲಿ ಮಾತ್ರ ಶಕ್ತಿದಾಯಕ ದೇಶ ಕಟ್ಟಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮೂಡಿಸುವ ಕೆಲಸವನ್ನು ಜೇಸಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜೇಸಿ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ಮಾತನಾಡಿ, ಯುವ ಜನರಿಗೆ ನಾಯಕತ್ವ ಬೆಳೆಸುವ ಕೆಲಸ ಜೇಸಿ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಪ್ರಬಂಧ, ರಸಪ್ರಶ್ನೆ ಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಹಿರಿಕರ ರವಿ ಹಾಗೂ ಪೊಲೀಸ್ ಮುಖ್ಯ ಪೇದೆ ಎ.ಎನ್. ರಮೇಶ್ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ‘೨೦೩೦ರಲ್ಲಿ ಭಾರತ ಹೇಗಿರುತ್ತದೆ?’ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಆಯಿಷಾ ತ್ರಿಶಾನ, ದ್ವಿತೀಯ ಎಸ್. ವಿದ್ಯಾ, ತೃತೀಯ ಬಿ.ಸಿ. ಅನ್ವಿತ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಆಯಿಷಾ, ದ್ವಿತೀಯ ಬಿ.ಪಿ. ಪ್ರೇರಣ, ತೃತೀಯ ಎಸ್. ವಿಜಯಲಕ್ಷಿö್ಮÃ ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಜೇಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ನಿಕಟಪೂರ್ವ ಅಧ್ಯಕ್ಷ ನೆಲ್ಸನ್ ಡಿಸೋಜ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷೆ ರಿಶಾ, ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ ಇದ್ದರು.