ಮಡಿಕೇರಿ, ಫೆ. ೨: ಗಡಿಪಾರು ಸಂಬAಧ ಜಿಲ್ಲೆಯ ಒಟ್ಟು ಐವರಿಗೆ ಕಾರಣ ತಿಳಿಸುವಂತೆ ನೋಟೀಸ್ ಜಾರಿಯಾದ ಹಿನ್ನೆಲೆ ಈ ಪೈಕಿ ಮೂವರು ಜಿಲ್ಲಾಡಳಿತ ಭವನದಲ್ಲಿರುವ ಉಪವಿಭಾಗಧಿಕಾರಿ ನ್ಯಾಯಾಲಯಕ್ಕೆ ಹಾಜರಾದರು.

ಮಡಿಕೇರಿ ನಗರದ ಕವನ್ ಕಾವೇರಪ್ಪ, ತಾಳತ್ತಮನೆಯ ವಿನಯ್ ಸೇರಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡAಗೇರಿ ಗ್ರಾಮದ ಕೆ.ಎಂ. ಅಬ್ದುಲ್ ಸಲಾಂ, ಕುಶಾಲನಗರ ಠಾಣಾ ವ್ಯಾಪ್ತಿಯ ಗೊಂದಿಬಸವನಹಳ್ಳಿಯ ಎನ್.ಎಲ್. ನವೀನ್ ಕುಮಾರ್, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿ ನಿವಾಸಿ ಅಜೀಂ ಬೇಗ್ ಅವರುಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತವನ್ನು ಕೋರಿದ್ದರು. ಅದರಂತೆ ಇವರುಗಳಿಗೆ ಉಪವಿಭಾಗಾಧಿಕಾರಿ ತಾ. ೨ ರಂದು ನ್ಯಾಯಾಲಯಕ್ಕೆ ಹಾಜರಾಗಿ ಗಡಿಪಾರು ಏಕೆ ಮಾಡಬಾರದು ಎಂಬ ಕಾರಣ ತಿಳಿಸುವಂತೆ ನೋಟೀಸ್ ಜಾರಿ ಮಾಡಿದ್ದರು.

ಈ ಪೈಕಿ ಕವನ್ ಹಾಗೂ ವಿನಯ್ ಹೊರತುಪಡಿಸಿ ಬಾಕಿ ಮೂವರು ನ್ಯಾಯಾಲಯಕ್ಕೆ ಹಾಜರಾದರು. ಗೈರಾದ ಇಬ್ಬರ ಪರವಾಗಿ ವಕೀಲ ಬಿ.ಇ. ಮೋಹನ್ ಕುಮಾರ್ ವಾದ ಮಂಡಿಸಿ ತನ್ನ ಕಕ್ಷಿದಾರರು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದು, ಒಂದು ಪ್ರಕರಣ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯದಿಂದ ಇನ್ನೂ ಯಾವುದೇ ತೀರ್ಪು ಪ್ರಕಟವಾಗಿಲ್ಲ. ಪೊಲೀಸ್ ಇಲಾಖೆ ಸೂಕ್ತ ದಾಖಲೆ ಒದಗಿಸದೆ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸೂಕ್ತ ದಾಖಲೆ

(ಮೊದಲ ಪುಟದಿಂದ) ಒದಗಿಸಲು ನ್ಯಾಯಾಧೀಶರಲ್ಲಿ ಕೋರಿದರು. ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಯತೀಶ್ ಉಲ್ಲಾಳ ತಾ. ೭ಕ್ಕೆ ಐವರು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದರು.

ಮೂವರಿಗೆ ನೋಟೀಸ್ ಸಾಧ್ಯತೆ

ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೋಪದಡಿ ಇನ್ನೂ ಮೂವರಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬAಧ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.