ಕುಶಾಲನಗರ, ಫೆ. ೧: ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗ ಕುಶಾಲನಗರ-ಕೊಪ್ಪ ವ್ಯಾಪ್ತಿಯಲ್ಲಿ ಜಿಲ್ಲೆಯ ನೈಜ ಗಡಿ ಭಾಗ ಗುರುತಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ.

ಕುಶಾಲನಗರದಿAದ ಮೈಸೂರು ಕಡೆಗೆ ತೆರಳುವ ಹೆದ್ದಾರಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಗೊಂಡಿದೆ. ಕೊಡಗು ಜಿಲ್ಲೆಯ ಗಡಿಭಾಗ ಮೈಸೂರು ಜಿಲ್ಲೆಯ ಅಂಚಿನ ತನಕ ಇರುವ ಪುರಾತನ ದಾಖಲೆಗಳು ಕಂಡು ಬರುತ್ತಿದ್ದು, ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸರಹದ್ದು ಮುಕ್ತಾಯ ಎನ್ನುವ ಫಲಕವೊಂದು ಅಲ್ಲಿನ ಅರಣ್ಯ ತಪಾಸಣಾ ಕೇಂದ್ರ ಬಳಿ ಅಳವಡಿಸಲಾಗಿದೆ. ನಗರ ಪೊಲೀಸ್ ಠಾಣೆ ಸರಹದ್ದು ಮುಕ್ತಾಯವಾಗುವ ಬಗ್ಗೆ ಫಲಕಗಳನ್ನು ಕೂಡ ಕಾಣಬಹುದು.

ಇನ್ನೊಂದೆಡೆ ಮೈಸೂರು ಜಿಲ್ಲಾಡಳಿತ ತನ್ನ ಸರಹದ್ದು ಅಲ್ಲಿನ ಕಾವೇರಿ ಪ್ರತಿಮೆ ಬಳಿ ತನಕ ಮಾತ್ರ ಗುರುತಿಸಿದೆ. ಆದರೆ, ಈ ನಡುವೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಯಾವ ಜಿಲ್ಲೆಗೆ ಸೇರಬೇಕಾಗಿದೆ ಎನ್ನುವ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಅಂದಾಜು ೧೨೦ ಮೀ.ಉದ್ದದ ಈ ಸೇತುವೆಯಲ್ಲಿ ಅಥವಾ ನದಿ ಭಾಗದಲ್ಲಿ ಯಾವುದೇ ಘಟನೆ ನಡೆದಲ್ಲಿ ಆಗಾಗ್ಗೆ ‘ಗಡಿಬಿಡಿ’ ವಿವಾದ ತಲೆದೋರುತ್ತಿರುವುದು ಸಾಮಾನ್ಯವಾಗಿದೆ.

ನದಿಯಲ್ಲಿ ಅಪರಿಚಿತ ಶವಗಳು ಕಂಡು ಬಂದಾಗ ಇದರ ಪ್ರತಿಕೂಲ ಪರಿಣಾಮ ಎರಡೂ ಜಿಲ್ಲೆಗಳ ಪೊಲೀಸರು ಎದುರಿಸುತ್ತಾರೆ. ಕಾವೇರಿ ನದಿ ಸೇತುವೆಯಲ್ಲಿ ನಡೆಯುವ ಘಟನೆಗಳಿಗೆ ಯಾವ ಜಿಲ್ಲೆಯ ಇಲಾಖೆಗಳನ್ನು ಸಂಪರ್ಕಿಸಬೇಕಾಗಿದೆ ಎನ್ನುವುದು ಇನ್ನೂ ಕೂಡ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಎದುರಿಸುತ್ತಿರುವ ಅಂತರರಾಜ್ಯ ಗಡಿ ವಿವಾದಗಳ ನಡುವೆ ಅಂತರ ಜಿಲ್ಲೆಗಳ ಗಡಿ ಗುರುತಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕಾಗಿದೆ ಎನ್ನುವುದು ಸಾರ್ವಜನಿಕರ ವಾದವಾಗಿದೆ.

ನೈಜ ಗಡಿ ಗುರುತಿನ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ‘ಶಕಿ’್ತಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ನಡೆಯುವ ಕಾರ್ಯಕ್ರಮಗಳ ಸಂದರ್ಭ ಮೆರವಣಿಗೆ, ವಿಐಪಿಗಳ ಸ್ವಾಗತಕ್ಕೆ ಮತ್ತಿತರ ಕಾರ್ಯಕ್ರಮಗಳಿಗೆ ಮಾತ್ರ ಕೆಲವೊಮ್ಮೆ ಜಿಲ್ಲೆಯ ನೈಜ ಗಡಿಯನ್ನು ಬಳಸುತ್ತಿರುವುದನ್ನು ಗಮನಿಸಬಹುದು. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಕೊಡಗು ಜಿಲ್ಲೆಯಗಡಿ ಬಗ್ಗೆ ದಾಖಲೆಯನ್ನು ಪರಿಶೀಲಿಸಿ ಈ ‘ಗಡಿಬಿಡಿ’ ಪ್ರಕರಣಕ್ಕೆ ಅಂತ್ಯ ಹಾಡಬೇಕಾಗಿದೆ. - ಚಂದ್ರಮೋಹನ್