ಕೂಡಿಗೆ, ಫೆ. ೧: ಕೂಡ್ಲೂರು ಕೈಗಾರಿಕಾ ಘಟಕದ ಕೇಂದ್ರದಲ್ಲಿ ಕಾಫಿ ಹೊಟ್ಟು ವ್ಯವಹಾರದಲ್ಲಿ ಸ್ಥಳೀಯ ವರ್ತಕರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕೂಡ್ಲೂರು ಕೈಗಾರಿಕಾ ಪ್ರದೇಶದ ಲಾರಿ ಮಾಲೀಕರ ಸಂಘ ಹಾಗೂ ಕಾಫಿ ಹಸ್ಕ್ ಮರ್ಚೆಂಟ್ಸ್ ಸಂಘದಿAದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಂಘದ ಅಧ್ಯಕ್ಷ ಕೆ.ಕೆ. ಭೋಗಪ್ಪ ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶದ ಕಾಫಿ ಘಟಕಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕಳೆದ ೨೦ ವರ್ಷಗಳಿಂದ ಕಾಫಿ ಹೊಟ್ಟು ಖರೀದಿಸಿ ಮಾರಾಟ ಮಾಡುವ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು, ಇದೀಗ ಸ್ಥಳೀಯ ವರ್ತಕರನ್ನು ಕಡೆಗಣಿಸುತ್ತಿರುವ ಕೆಲವು ಕಾಫಿ ಸಂಸ್ಥೆಗಳು ನೇರವಾಗಿ ಹೊರ ರಾಜ್ಯದವರಿಗೆ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಇದೇ ವ್ಯವಹಾರ ನಂಬಿ ಜೀವನ ಕಟ್ಟಿಕೊಂಡಿದ್ದ ಸ್ಥಳೀಯ ನೂರಾರು ಮಂದಿಗೆ ಉದ್ಯೋಗ ಇಲ್ಲದಂತಾಗಿದೆ ಎಂದು ಹಸ್ಕ್ ವ್ಯಾಪಾರಿ ಸಂಘದ ಸದಸ್ಯ ರಾಘವೇಂದ್ರ ಆರೋಪಿಸಿದ್ದಾರೆ.
೩೦ ಲಾರಿಗಳ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಂಡಿದ್ದು ಕೂಡಲೇ ನಮ್ಮ ಸಮಸ್ಯೆಗೆ ಕಾಫಿ ವರ್ಕ್ ಮಾಲೀಕರು ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎ. ಚಿಣ್ಣಪ್ಪ, ಖಜಾಂಚಿ ಎಂ.ಕೆ. ಹನುಮರಾಜು, ಕಾರ್ಯದರ್ಶಿ ಪಿ.ಎ. ಕಾರ್ಯಪ್ಪ, ಪ್ರಮುಖರಾದ ಸುರೇಶ್, ರವಿ, ಎಚ್.ಕೆ. ರಾಘವೇಂದ್ರ, ಹಿರಣ್ಯಕುಮಾರ್, ಸುಶಾಂತ್ ಗೌಡ, ಸಚಿನ್, ದಿಲೀಪ್ ಗೌಡ, ಯುವರಾಜ ಮತ್ತಿತರರು ಇದ್ದರು.