ಕೂಡಿಗೆ, ಫೆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕುಶಾಲನಗರ ಪುರಸಭೆ ವತಿಯಿಂದ ನಿರ್ಮಿಸಲಾಗಿರುವ ನೂತನ ಆಧುನಿಕ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆಯ ನೂತನ ರೂ. ೮೪ ಲಕ್ಷ ವೆಚ್ಚದ ಕಟ್ಟಡವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಕಸ ವಿಲೇವಾರಿಗೆ ಸಂಬAಧಿಸಿದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನೂತನ ಮಾದರಿಯ ಕಸ ವಿಲೇವಾರಿ ಘಟಕವನ್ನು ತೆರೆಯಲಾಗಿದೆ. ಒಣ ಕಸ ಮತ್ತು ಹಸಿ ಕಸ ಸೇರಿದಂತೆ ಪ್ಲಾಸ್ಟಿಕ್ ಅನ್ನು ನಿರ್ಮೂಲ ಮಾಡುವ ಮೂಲಕ ಗ್ರಾಮಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಪುರಸಭೆ ವತಿಯಿಂದ ಕಸ ವಿಲೇವಾರಿ ಘಟಕದಲ್ಲಿ ಆಧುನಿಕ ವ್ಯವಸ್ಥೆ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನವನ್ನು ಕಾಯ್ದಿರಿಸಿ ಕಸ ವಿಂಗಡಣೆಯ ಮೂಲಕ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆೆ ನೀಡಬೇಕು ಎಂದು ತಿಳಿಸಿದರು.
ಕುಶಾಲನಗರ ಪುರಸಭೆ ಅಧ್ಯಕ್ಷ ಜೈವರ್ಧನ್ ಮಾತನಾಡಿ, ಕೂಡಿಗೆ ಗ್ರಾಮ ಪಂಚಾಯಿತಿಯ ಮನವಿ, ಸಾರ್ವಜನಿಕರ ದೂರು, ಸಮೀಪದ ಗ್ರಾಮದ ರೈತರ ಬೇಡಿಕೆಯ ಅನುಗುಣವಾಗಿ ಯಾರಿಗೂ ಕಸ ವಿಲೇವಾರಿ ಘಟಕದಿಂದ ತೊಂದರೆಗಳು ಆಗದಂತೆ ಪುರಸಭೆಯ ಮಾಸಿಕ ಸಭೆಯ ಸರ್ವ ಸದಸ್ಯರ ತೀರ್ಮಾನದಂತೆ ನೂತನವಾಗಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಕಸ ವಿಲೇವಾರಿ ಘಟಕದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಒಣ ಕಸದಲ್ಲಿ ಸಾವಯುವ ಗೊಬ್ಬರ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಸುರಯ್ಯ ಬಾನು, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಸುರೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಗಿರೀಶ್, ಚಂದ್ರು, ಸಹಕಾರ ಸಂಘದ ಮಾಜಿ ನಿರ್ದೇಶಕ ಮಂಜಯ್ಯ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ, ಇಂಜಿನಿಯರ್ ರಂಗರಾಮ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.