ಗೋಣಿಕೊಪ್ಪ ವರದಿ, ಫೆ. ೧: ಗೋಣಿಕೊಪ್ಪ ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಪಿರಿಯಾಪಟ್ಟಣ ಕೆರೆಯ ದಂಡೆಯಲ್ಲಿ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ೬೧ ಬಗೆಯ ಹಕ್ಕಿಗಳನ್ನು ಗುರುತಿಸಲಾಯಿತು.

ಕೆರೆ ದಂಡೆಯಲ್ಲಿ ನಡಿಗೆ ಮೂಲಕ ಪಕ್ಷಿ ವೀಕ್ಷಣೆ ಮಾಡಲಾಯಿತು. ಮೂರು ಬಗೆಯ ಮಿಂಚುಳ್ಳಿ, ಗದ್ದೆ ಗೊರವ, ಮೂರು ಬಗೆಯ ಬಕ, ಎರಡು ಬಗೆಯ ನೀರು ಕಾಗೆ, ಬ್ರಾಂಜ್ ವಿಂಗ್ಡ್ ಜಾಕನ, ಪರ್ಪಲ್ ಸ್ವಾಂಪ್ ಹೆನ್, ಗ್ರೇಟರ್ ಸ್ಪಾಟ್ ಈಗಲ್, ಹಳದಿ ಪಾದದ ಪಾರಿವಾಳ, ಚುಕ್ಕಿ ಚೋರೆ, ಹೆಜ್ಜಾರ್ಲೆ, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಗ್ರೀಬ್, ಕೋಗಿಲೆ, ಮೂರು ಬಗೆಯ ಬುಲ್ ಬುಲ್ ಹೀಗೆ ಸುಮಾರು ೬೧ ಬಗೆಯ ಹಕ್ಕಿಗಳನ್ನು ಗುರುತಿಸಲಾಯಿತು.

೩೩ ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆ ಮಾಡಿದರು. ಜೀವ ವಿಜ್ಞಾನ ಶಿಕ್ಷಕ ಡಿ. ಕೃಷ್ಣ ಚೈತನ್ಯ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷಿ ವೀಕ್ಷಣೆ ಪೂರಕ ಬಟ್ಟೆ, ಮಾಹಿತಿ ಪುಸ್ತಕ ಹಾಗೂ ಪೆನ್, ಪೆನ್ಸಿಲ್ ಮೂಲಭೂತ ಅವಶ್ಯಕತೆಗಳ ಬಗ್ಗೆ ತಿಳಿಸಿಕೊಟ್ಟರು. ಪಕ್ಷಿಗಳು ಮಾನವ ಮಿತ್ರರಾಗಿದ್ದು ಕೆರೆ, ರೈತನ ಬೆಳೆ ರಕ್ಷಣೆಯನ್ನು ಮಾಡುತ್ತಿರುವುದರ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕಿ ಜ್ಯೋತಿ ಇದ್ದರು.