ಮಡಿಕೇರಿ, ಫೆ. ೧: ಕೊಡವ ಜನಾಂಗ, ಕೋವಿ ಹಕ್ಕು, ಮಹಿಳೆಯರು ಹಾಗೂ ಸೇನಾಧಿಕಾರಿಗಳ ಕುರಿತಾಗಿ ಅವಹೇಳನ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿರುವ ಬಗ್ಗೆ ಆಕ್ಷೇಪಿಸಿ ಕೆಲವು ಸಂಘಟನೆಗಳು ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ವಿರುದ್ಧ ಸಲ್ಲಿಸಿರುವ ದೂರಿನ ವಿಚಾರಣೆ ಬೆಂಗಳೂರಿನಲ್ಲಿ ನಡೆದಿದೆ.

ಈ ಬಗ್ಗೆ ಹಲವು ಸಮಯದ ಹಿಂದೆ ಕೊಡವಾಮೆರ ಕೊಂಡಾಟ ಸಂಘಟನೆ ಗೋಣಿಕೊಪ್ಪ ಠಾಣೆಯಲ್ಲಿ ದೂರು ನೀಡಿತ್ತು. ಇದಾದನಂತರ ಮಡಿಕೇರಿ ಸೇರಿದಂತೆ ಸುಮಾರು ಎಂಬತ್ತು ಕಡೆಗಳಲ್ಲಿ ಈ ಕುರಿತಾಗಿ ಇನ್ನಿತರ ಕೆಲವು ಸಂಘಟನೆಗಳೂ ದೂರು ನೀಡಿದ್ದವು.

ಗೋಣಿಕೊಪ್ಪದಲ್ಲಿ ಮೊದಲು ದಾಖಲಾದ ದೂರಿನಂತೆ ಎಫ್‌ಐಆರ್ ಆಗಿತ್ತು. ವೈ.ಕೆ. ಚೇತನ್ ಅವರು ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವುದರಿಂದ ಈ ಪ್ರಕರಣಗಳು ಅಲ್ಲಿನ ಠಾಣೆಗೆ ವರ್ಗಾವಣೆಯಾಗಿವೆ. ಇಂದು ದೂರುದಾರರೊಂದಿಗೆ ಆರ್‌ಟಿ ನಗರ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ವಿಚಾರಣೆ ನಡೆದಿದ್ದು, ಇದೀಗ ಚಾರ್ಜ್ಶೀಟ್ ಸಲ್ಲಿಕೆಯ ಹಂತದಲ್ಲಿರುವುದಾಗಿ ಸಂಘಟನೆಯ ಪ್ರಮುಖರು ಮಾಹಿತಿ ನೀಡಿದ್ದಾರೆ.