ಗೋಣಿಕೊಪ್ಪಲು, ಜ. ೩೧: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ ಯೋಜನೆಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ೫ ಕೋಟಿ ಅನುದಾನವನ್ನು ಕ್ರೋಢಿಕರಿಸುವ ಸಲುವಾಗಿ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರದ ವತಿಯಿಂದ ೧ ಕೋಟಿ ಅನುದಾನ ಆರಂಭಿಕ ಹಂತದಲ್ಲಿ ಬಿಡುಗಡೆಯಾಗಿದೆ. ಹಂತ ಹಂತವಾಗಿ ನಿಲ್ದಾಣದ ಕಾಮಗಾರಿ ಸಂಬAಧ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯ ಬಿ.ಎನ್. ಪ್ರಕಾಶ್ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನೂತನ ಬಸ್ ನಿಲ್ದಾಣದ ನೀಲಿನಕ್ಷೆಯು ಕೆಲವೆ ಸಮಯದಲ್ಲಿ ಅಂತಿಮಗೊಳ್ಳಲಿದೆ. ಅಂದಾಜು ೩೦ ಕೊಠಡಿ ಸೌಕರ್ಯವುಳ್ಳ ವಾಣಿಜ್ಯ ಸಂಕೀರ್ಣದೊAದಿಗೆ ನಿಲ್ದಾಣವನ್ನು ಕಟ್ಟಲಾಗುವುದು. ವಾಣಿಜ್ಯ ಸಂಕೀರ್ಣದ ಕಟ್ಟಡವನ್ನು ಟೆಂಡರ್ ಪ್ರಕ್ರಿಯೆ ಮೂಲಕ ನೀಡಲಾಗುತ್ತಿದೆ. ಇದರಿಂದ ಬರುವ ಅನುದಾನದಿಂದ ಬಸ್ ನಿಲ್ದಾಣದ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. ಸದ್ಯದಲ್ಲಿಯೇ ಈ ಬಗ್ಗೆ ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ಹೊರ ರಾಜ್ಯದ ವಾಹನಗಳು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವುದು, ಧ್ವನಿವರ್ಧಕ ಬಳಸಿ ಮಾರಾಟ ನಡೆಸುತ್ತಿರುವುದು ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸುತ್ತಿರುವುದು, ಗೂಡ್ಸ್ ವಾಹನಗಳು ಅಂಗಡಿಯ ಮುಂದೆ ಗಂಟೆಗಟ್ಟಲೆ ಪಾರ್ಕಿಂಗ್ ಮಾಡುತ್ತಿರುವುದು ನಿಲ್ದಾಣದ ಆಸುಪಾಸಿನಲ್ಲಿ ಆಟೋ ರಿಕ್ಷಾಗಳ ಓಡಾಟ, ಹಲವು ಮಳಿಗೆಗಳ ಮುಂದೆ ಬ್ಯಾರಿಕೇಡ್ ಅಳವಡಿಸಿ ಪಾರ್ಕಿಂಗ್ ಜಾಗವನ್ನು ಅಂಗಡಿ ಮಾಲೀಕರು ನಿಯಮ ಬಾಹಿರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಬೈಪಾಸ್ ರಸ್ತೆಯ ಆರಂಭದಲ್ಲಿ ಸಾಲು ಸಾಲಾಗಿ ವಾಹನ ನಿಲುಗಡೆ ಆಗುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿವೆ. ಇದನ್ನು ಕಡಿವಾಣ ಹಾಕಿದಲ್ಲಿ ನಗರದಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಸಂಭವಿಸುವುದಿಲ್ಲ ಈ ಬಗ್ಗೆ ಪೊಲೀಸ್ ಹಾಗೂ ಪಂಚಾಯಿತಿ ಕಠಿಣ ನಿರ್ಧಾರ ಕೈಗೊಳ್ಳುವಂತೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಹಿರಿಯ ಗ್ರಾಮಸ್ಥರಾದ ಪಿ.ಕೆ. ಪ್ರವೀಣ್, ಅಬ್ದುಲ್ ಸಮ್ಮದ್ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪೊಲೀಸ್ ಠಾಣಾಧಿಕಾರಿಗಳು ರಸ್ತೆಯ ಬದಿಯಲ್ಲಿ ಅಂಗಡಿ ಮಾಲೀಕರು ವಾಹನ ನಿಲುಗಡೆ ಮಾಡುವುದನ್ನು ಕಡಿಮೆ ಮಾಡಬೇಕು. ಕೆಲವು ಅಂಗಡಿ ಮಾಲೀಕರು ಅನಧೀಕೃತವಾಗಿ ತಮ್ಮ ತಮ್ಮ ಅಂಗಡಿಯ ಮುಂದೆ ಹಾಕಿರುವ ಬ್ಯಾರಿಕೇಡ್‌ಗಳನ್ನು ಪಂಚಾಯಿತಿ ತೆರವುಗೊಳಿಸಬೇಕು. ನಗರಕ್ಕೆ ಬರುವ ಗೂಡ್ಸ್ ವಾಹನಗಳು ಮುಂಜಾನೆ ೯ ಗಂಟೆಯ ಒಳಗೆ ತಮ್ಮ ಸಾಮಗ್ರಿಗಳನ್ನು ಇಳಿಸಲು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ನಿಲ್ದಾಣದ ಸುತ್ತಮುತ್ತಲಿನಲ್ಲಿ ಅನಾವಶ್ಯಕವಾಗಿ ಸಂಚರಿಸುವ ಆಟೋರಿಕ್ಷಾಗಳ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಲ್ಲದಂತೆ ಕ್ರಮ ವಹಿಸಲಾಗುವುದು. ಮುಂಜಾನೆ ೮.೩೦ಕ್ಕೆ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸುವ್ಯವಸ್ಥೆಗೆ ಪೊಲೀಸ್ ಸಿಬ್ಬಂದಿ ಯನ್ನು ನಿಯೋಜಿಸಲಾಗುತ್ತದೆ. ಅಂಗಡಿ ಮಾಲೀಕರು ತಮ್ಮ ಮಳಿಗೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ರಸ್ತೆಗೆ ಅಭಿಮುಖವಾಗಿ ಕಾಣುವಂತೆ ಮಾಡುವುದರಿಂದ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯವಾಗಲಿದೆ ಎಂದು ಸಭೆಗೆ ತಿಳಿಸಿದರು.

ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ, ಆಯಾಕಟ್ಟಿನ ಸ್ಥಳದಲ್ಲಿ ನಾಮಫಲಕ ಅಳವಡಿಕೆ,ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಮಾರ್ಕಿಂಗ್‌ಗೆ ಪಂಚಾಯಿತಿ ನಿಧಿಯಿಂದ ೧ ಲಕ್ಷ ಅನುದಾನವನ್ನು ಮೀಸಲಿಟ್ಟಿರುವುದಾಗಿ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು. ಉಳಿದ ಹಣವನ್ನು ಚೇಂಬರ್ ಆಫ್ ಕಾಮರ್ಸ್ ಸಹಕಾರ ಪಡೆದು ಮಾಡಲಾಗುತ್ತದೆ ಎಂದು ವಿವರ ನೀಡಿದರು.

ನಗರದಲ್ಲಿ ಆಗಿಂದಾಗ್ಗೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗುತ್ತಿದೆ, ಗುಣಮಟ್ಟದ ವಿದ್ಯುತ್ ಲಭ್ಯವಾಗದ ಹಿನೆÀ್ನಲೆಯಲ್ಲಿ ಶಾರ್ಟ್ಸರ್ಕ್ಯೂಟ್ ಸಂಭವಿಸುತ್ತಿರು ವುದರಿಂದ ಮನೆಯಲ್ಲಿರುವ ಎಲೆಕ್ಟಾçನಿಕ್ ವಸ್ತುಗಳು ಹಾಳಾಗುತ್ತಿವೆ. ಇದಕ್ಕೆ ಗೋಣಿಕೊಪ್ಪ ಸೆಸ್ಕ್ ಸಿಬ್ಬಂದಿಗಳ ಕರ್ತವ್ಯ ಲೋಪವೆ ಕಾರಣ ಎಂದು ಗ್ರಾಮಸ್ಥರಾದ ಕೆ.ಎಂ. ತಿಮ್ಮಯ್ಯ, ರಾಣಿ ನಾರಾಯಣ, ಸುನೀಲ್ ಮಾದಪ್ಪ, ನಾರಾಯಣಸ್ವಾಮಿ ನಾಯ್ಡು, ಪಿ.ಕೆ. ಪ್ರವೀಣ್ ಹೇಳಿದರು.

ಇದಕ್ಕೆ ಉತ್ತರಿಸಿದ ಸೆಸ್ಕ್ ಇಂಜಿನಿಯರ್ ನಗರದಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲವು ತಿಂಗಳುಗಳಲ್ಲಿ ಕಾಮಗಾರಿಯು ಪೂರ್ಣಗೊಳ್ಳಲಿದೆ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಅವಶ್ಯವಿರುವ ಕಡೆ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಲಾಗು ತ್ತದೆ. ಇದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಕಚೇರಿಯಲ್ಲಿ ಕೇವಲ ೧೬ ಸಿಬ್ಬಂದಿಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ೨೪ ಹುದ್ದೆಗಳು ಖಾಲಿ ಇರುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಗ್ರಾಹಕರು ತಮ್ಮ ಮನೆಗಳಲ್ಲಿರುವ ಹಳೆಯ ವಿದ್ಯುತ್ ವಯರ್‌ಗಳನ್ನು ಬದಲಾಯಿ ಸುವಂತೆ ಮನವಿ ಮಾಡಿದರು.

ಗೋಣಿಕೊಪ್ಪ ನಗರವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಸದಸ್ಯರಾದ ಬಿ.ಎನ್.ಪ್ರಕಾಶ್ ಪ್ರಸ್ತಾಪಿಸಿ ಈ ಹಿಂದೆ ಪುರಸಭೆ ಇದ್ದ ಕಾರಣ ೫ ಗ್ರಾಮಗಳು ಸೇರಿ ಪುರಸಭೆಯಾಗಿತ್ತು. ಅಲ್ಲಿಂದ ಇಲ್ಲಿಯತನಕ ಗೋಣಿಕೊಪ್ಪ ನಗರ ಕಂದಾಯ ಗ್ರಾಮವಾಗಿರಲಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಭೆಯ ನಿರ್ಣಯ ಕಳುಹಿಸುವ ಮೂಲಕ ಕಂದಾಯ ಗ್ರಾಮವನ್ನಾಗಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದರು.

ನಗರದಲ್ಲಿ ಹದಿಹರೆಯದ ಯುವಕ, ಯುವತಿಯರು ದ್ವಿಚಕ್ರವಾಹನದಲ್ಲಿ ಅತೀ ವೇಗದೊಂದಿಗೆ ಮೂರು ಮಂದಿ ಸವಾರಿ ಮಾಡುತ್ತಿರುತ್ತಾರೆ. ಇದರಿಂದ ಅಪಘಾತಗಳು ಎದುರಾಗಲಿವೆ. ಈ ನಿಟ್ಟಿನಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಕ್ರಮಕೈಗೊಳ್ಳಬೇಕು, ಅತೀ ವೇಗ ನಿಯಂತ್ರಿಸಲು ಶಾಲಾ-ಕಾಲೇಜು, ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ನಿಲ್ದಾಣದಲ್ಲಿ ಗಾಂಜಾ ಮಾರಾಟಗಾರರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ರಾಣಿ ನಾರಾಯಣ, ಕುಪ್ಪಂಡ ತಿಮ್ಮಯ್ಯ, ಹೆಚ್.ಆರ್. ಪರಶುರಾಮ್ ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿ ಶಾಲೆಯ ಸಮೀಪ ಅಳವಡಿಸಲು ಇಲಾಖೆ ವತಿಯಿಂದ ಬ್ಯಾರೀಕೆಡ್ ನೀಡಲಾಗುತ್ತದೆ. ಇದರ ನಿರ್ವಹಣೆಯನ್ನು ಶಾಲೆಯ ಆಡಳಿತ ಮಂಡಳಿ ಮಾಡಬೇಕು. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದರು. ಮುಂಜಾನೆಯ ನಿಯಮ ಬಾಹಿರವಾಗಿ ಬ್ರಾಂದಿ ಅಂಗಡಿಗಳು ತೆರೆಯುತ್ತಿರುವ ಬಗ್ಗೆ ಟಿ.ಎನ್. ಗೋವಿಂದಪ್ಪ ಅಧಿಕಾರಿಗಳ ಗಮನ ಸೆಳೆದು ಇಂತಹವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಪೌರ ಕಾರ್ಮಿಕರಿಗೆ ಪಂಚಾಯಿತಿ ಮೀಸಲಿಟ್ಟಿರುವ ಜಾಗದಲ್ಲಿ ಹಂತ ಹಂತವಾಗಿ ಸುಸಜ್ಜಿತ ವಸತಿ ಗೃಹಗಳನ್ನು ವಿವಿಧ ಬಡಾವಣೆಗಳಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ವಸತಿ ಗೃಹಗಳು ಪ್ರಗತಿಯಲ್ಲಿದ್ದು ಪಂಚಾಯಿತಿ ಯಲ್ಲಿರುವ ಅರ್ಹ ಸಿಬ್ಬಂದಿಗಳಿಗೆ ಇದನ್ನು ನೀಡಲಾಗುತ್ತದೆ. ಇದರ ಒಡೆತನವು ಪಂಚಾಯಿತಿಗೆ ಸೇರಿರುತ್ತದೆ ಎಂದು ಪರಶುರಾಮ್ ಕೇಳಿದ ಪ್ರಶ್ನೆಗೆ ಸದಸ್ಯ ಬಿ.ಎನ್. ಪ್ರಕಾಶ್ ಉತ್ತರಿಸಿದರು.

ಗ್ರಾಮಸ್ಥರಾದ ಟಿ.ಎಲ್. ಶ್ರೀನಿವಾಸ್ ಮಾತನಾಡಿ ಕೀರೆ ಹೊಳೆ ಹಾಗೂ ಕೈತೋಡುವಿನ ಗಡಿಯನ್ನು ಗುರುತಿಸಲು ಕಂದಾಯ ಇಲಾಖೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಿವೇಶನ ಹೊಂದಿರುವವರಿಗೆ ಕಟ್ಟಡ ನಿರ್ಮಾಣ ಮಾಡಲು ಸಮಸ್ಯೆ ಎದುರಾಗುತ್ತದೆ ಎಂದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಕಂದಾಯ ಸಿಬ್ಬಂದಿ ಮಾಹಿತಿ ನೀಡಿದರು.

ಹಿಂದೂ ರುದ್ರ ಭೂಮಿಯನ್ನು ಅಭಿವೃದ್ಧಿಪಡಿಸಬೇಕು. ಆ ನಿಟ್ಟಿನಲ್ಲಿ ನೂತನ ನಿರ್ವಾಹಣ ಸಮಿತಿ ರಚಿಸುವಂತೆ ಹಿರಿಯರಾದ ಪಿ.ಕೆ. ಪ್ರವೀಣ್ ಹಾಗೂ ಭಾಸ್ಕರ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವು ದೆಂದು ಅಧ್ಯಕ್ಷರು ಉತ್ತರಿಸಿದರು. ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿಯನ್ನು ಒದಗಿಸಿದರು. ಕಂದಾಯ ಇಲಾಖೆ ಯಲ್ಲಿ ಬಡ ಜನತೆ ಆಗಮಿಸಿದ ವೇಳೆ ಸಿಬ್ಬಂದಿಗಳು ಉತ್ತಮವಾಗಿ ಸ್ಪಂದನ ನೀಡುತ್ತಿಲ್ಲ ಎಂದು ಪಂಚಾಯಿತಿ ಸದಸ್ಯೆ ಜಿ.ಕೆ. ಗೀತಾ ಅಧಿಕಾರಿಗಳ ಗಮನ ಸೆಳೆದರು. ಬಡವರು ಕಚೇರಿಗೆ ಆಗಮಿಸಿದ ವೇಳೆ ಅವರನ್ನು ಅಲೆದಾಡಿಸದೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕೆಂದರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ತಾ.ಪಂ.ಯ ತಾಲೂಕು ಯೋಜನ ಅಧಿಕಾರಿ ನಂದೀಶ್ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್ ಹಲವು ಮಾಹಿತಿಗಳನ್ನು ಗ್ರಾಮಸ್ಥರಿಗೆ ಒದಗಿಸಿದರು.

ಹಳೆಯ ಅಂಚೆ ಕಚೇರಿಯ ಬಡಾವಣೆಗೆ ವಿವೇಕಾನಂದ ಬಡಾವಣೆ ಎಂದು ನಾಮಕರಣ ಮಾಡಲು ಪೊನ್ನಿಮಾಡ ಸುರೇಶ್ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸದಸ್ಯರಾದ ಕೊಣಿಯಂಡ ಬೋಜಮ್ಮ, ಚೈತ್ರ ಬಿ. ಚೇತನ್, ಪ್ರಮೋದ್ ಗಣಪತಿ, ಧ್ಯಾನ್ ಸುಬ್ಬಯ್ಯ, ಶರತ್‌ಕಾಂತ್, ಎಂ. ಮಂಜುಳ, ಕೆ. ರಾಜೇಶ್, ಹಕೀಮ್, ಧನಲಕ್ಷಿö್ಮ, ಪುಷ್ಪ ಮನೋಜ್, ರತಿ ಅಚ್ಚಪ್ಪ, ರಾಮದಾಸ್, ಸೇರಿದಂತೆ ಇನ್ನಿತರ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಾದ ನೂರೇರ ರತಿ ಅಚ್ಚಪ್ಪ ಪ್ರಾರ್ಥಿಸಿ, ಕಾರ್ಯದರ್ಶಿ ಗುರುಶ್ರಿ ಸ್ವಾಗತಿಸಿ ಲೆಕ್ಕಾಧಿಕಾರಿ ಶುಭಾಶ್ ವಂದಿಸಿದರು.

-ಹೆಚ್.ಕೆ. ಜಗದೀಶ್