ಸೋಮವಾರಪೇಟೆ, ಜ. ೩೧: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿ ನಂತರದ ದಿನಗಳಲ್ಲಿ ಹಲವಷ್ಟು ಅಡೆತಡೆಗಳನ್ನು ಕಂಡ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿ, ಆಮೆಗತಿ ಯನ್ನೂ ನಾಚಿಸುವಂತೆ ತೆವಳುತ್ತಿದ್ದು, ಬರೋಬ್ಬರಿ ೧೦ ವರ್ಷಗಳ ನಂತರ ಉದ್ಘಾಟನೆಯ ಭಾಗ್ಯಕ್ಕೆ ಎದುರು ನೋಡುತ್ತಿದೆ!

ಭೂಮಿಪೂಜೆ ನೆರವೇರಿ ಬರೋಬ್ಬರಿ ೧೦ ವರ್ಷಗಳಾದರೂ ಇಂದಿಗೂ ಟರ್ಫ್ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಇಲ್ಲಿನ ಕ್ರೀಡಾಪಟುಗಳಿಗೆ, ಕ್ರೀಡಾಪ್ರೇಮಿಗಳಿಗೆ ಮಾಡಿದ ಅವಮಾನ ಎಂದರೂ ತಪ್ಪಾಗದು! ಕಳೆದ ೨ ವರ್ಷಗಳ ಹಿಂದಷ್ಟೇ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯು ತರಾತುರಿಯಲ್ಲಿ ಟರ್ಫ್ ಮ್ಯಾಟ್ ಅಳವಡಿಸಿದ್ದು, ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ರೂ. ೩ ಕೋಟಿಯಷ್ಟು ಹಣ ಡ್ರಾ ಮಾಡಿಕೊಂಡಿದೆ.

ಇನ್ನೂ ಪೂರ್ಣಗೊಳ್ಳದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿದ್ದು, ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿದ್ದುದು ಸ್ಪಷ್ಟವಾಗಿದೆ.

ಅಪೂರ್ಣ ಕಾಮಗಾರಿ: ಬಿಲ್ ಮಾಡಿಸುವ ಸಲುವಾಗಿ ಮೈದಾನಕ್ಕೆ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ವಾಟರ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ. ಬೋರ್‌ವೆಲ್ ಕೊರೆಸಲಾಗಿದ್ದರೂ ಮೋಟಾರ್ ಅಳವಡಿಸಿಲ್ಲ. ವಿದ್ಯುತ್ ಸಂಪರ್ಕ, ಟ್ರಾನ್ಸ್ಫಾರ್ಮರ್ ಒದಗಿಸದೇ ಇದ್ದರೂ ಮ್ಯಾಟ್ ಅಳವಡಿಸಲಾಗಿದೆ.

ಟರ್ಫ್ ಮ್ಯಾಟ್‌ಗೆ ನೀರು ಸಿಂಪಡಿಸಲು ಸಣ್ಣ ಜೆಟ್‌ಗಳನ್ನು ಅಳವಡಿಸಿದ್ದು, ಇದು ಪ್ರಯೋಜನಕ್ಕೆ ಬರುತ್ತಿಲ್ಲ. ಶೇ.೪೦ರಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿದ್ದರೂ ಎಫ್‌ಐಹೆಚ್‌ನಿಂದ ದೃಢೀಕರಣ ಪತ್ರ ನೀಡಿರುವುದು ಆಡಳಿತ ವರ್ಗದ ಪಾರದರ್ಶಕತೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

೨೦೧೩ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. ೩.೪೦ ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು.

ಕಳೆದ ತಾ. ೧೪.೦೩.೨೦೧೩ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಂದಿನ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡ ಲಾಗಿತ್ತು. ಉದ್ದೇಶಿತ ಕಾಮಗಾರಿಗೆ ಅನುದಾನ ಸಾಲದು ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆ, ಸ್ಥಳೀಯ ಹಾಕಿ ಪ್ರೇಮಿಗಳು ಶಾಸಕ ಅಪ್ಪಚ್ಚು ರಂಜನ್ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಹಿಂದಿನ ಲೆಕ್ಕಾಚಾರಕ್ಕಿಂತಲೂ ೭೫ ಲಕ್ಷ ಹೆಚ್ಚು ಅನುದಾನ ಒದಗಿಸಿ ಒಟ್ಟು ೪.೧೫ ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಮೈದಾನದ ಮೇಲುಸ್ತುವಾರಿಗೆ ಶಾಸಕರ ಸಲಹೆಯಂತೆ ಸಮಿತಿ ರಚಿಸಲಾಗಿದ್ದು, ಸಮಿತಿಯ ಪ್ರಮುಖರು ಕಾಮಗಾರಿಯ ಬಗ್ಗೆ ಆಗಾಗ್ಗೆ ಗಮನ ಹರಿಸುತ್ತಿದ್ದರು. ಆದರೂ ಸಂಬAಧಿಸಿದ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆ ಪಡೆದ ಕಂಪೆನಿಯವರು ಟರ್ಫ್ ಪೂರ್ಣಗೊಳಿಸಲು ಮುಂದಾಗಿಲ್ಲ.

ಈಗಾಗಲೇ ಅಳವಡಿಸಿರುವ ಟರ್ಫ್ ಅಲ್ಲಲ್ಲಿ ಕಿತ್ತುಬರುತ್ತಿದೆ. ಬಿಸಿಲಿಗೆ ಒಣಗಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಟರ್ಫ್ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಮ್ಯಾಟ್- ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗಲಿದೆ ಎಂದು ಕ್ರೀಡಾಪ್ರೇಮಿಗಳು ಅಭಿಪ್ರಾಯಿಸಿದ್ದಾರೆ.

ಶಾಸಕ ರಂಜನ್ ಭೇಟಿ: ಫೆಬ್ರವರಿಗೆ ಉದ್ಘಾಟನೆ: ಈ ಮಧ್ಯೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಟರ್ಫ್ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬAಧಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಭಿಯಂತರ ಹರೀಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.ಫೆಬ್ರವರಿ ಎರಡನೇ ವಾರದಲ್ಲಿ ಟರ್ಫ್ ಮೈದಾನವನ್ನು ಉದ್ಘಾಟಿಸಲು ಕ್ರಮ ವಹಿಸುವಂತೆ ಶಾಸಕರು ಸೂಚಿಸಿದ್ದು, ಫೆಬ್ರವರಿ ಮೊದಲನೇ ವಾರದಲ್ಲಿಯೇ ಕಾಮಗಾರಿ ಪೂರ್ಣ ಗೊಳಿಸುವುದಾಗಿ ಅಭಿಯಂತರ ಹರೀಶ್ ಅವರು ತಿಳಿಸಿದ್ದಾರೆ. ಇಂತಹ ಭರವಸೆಗಳು ಸಾಕಷ್ಟು ಬಾರಿ ಅಭಿಯಂತರರಿAದ ದೊರಕಿದೆ. ಆದರೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಹಲವು ಬಾರಿ ಶಾಸಕರೇ ಸೂಚನೆ ನೀಡಿದ್ದರೂ ಅಭಿಯಂತರರು ಮೂಗಿಗೆ ತುಪ್ಪ ಸವರಿ ಬೆಂಗಳೂರಿಗೆ ತೆರಳಿದ್ದಾರೆ. ಈ ಬಾರಿಯಾದರೂ ಶಾಸಕರ ಸೂಚನೆಯಂತೆ ಟರ್ಫ್ ಮೈದಾನ ಉದ್ಘಾಟನೆಗೊಂಡು ಕ್ರೀಡಾಪಟುಗಳ ಉಪಯೋಗಕ್ಕೆ ಲಭಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಫೆಬ್ರವರಿ ಎರಡನೇ ವಾರದಲ್ಲಿ ಸಿಂಥೆಟಿಕ್ ಟರ್ಫ್ ಮೈದಾನವನ್ನು ಉದ್ಘಾಟಿಸಲಾಗುವುದು. ಕೆಲವೊಂದು ಸಣ್ಣಪುಟ್ಟ ಕಾಮಗಾರಿಗಳು ಬಾಕಿಯಿದ್ದು, ತಕ್ಷಣ ಪೂರ್ಣಗೊಳಿಸು ವಂತೆ ಸೂಚನೆ ನೀಡಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. -ವಿಜಯ್ ಹಾನಗಲ್