ಮಡಿಕೇರಿ, ಜ. ೩೧: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ ೧೪ ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ವತಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೬ರ ರಾಜ್ಯದ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಅನುಗುಣವಾಗಿ ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ನೌಕರರಿಗೆ ವೇತನ ನಿಗದಿಪಡಿಸಬೇಕು. ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ಇದನ್ನು ಮನಗಂಡು ಸರಕಾರ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಕರವಸೂಲಿಗಾರರು, ಕ್ಲರ್ಕ್, ಡಾಟಾ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರೆಂದು ಘೋಷಿಸಬೇಕು, ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು, ಜಿ.ಪಂ.ನಲ್ಲಿ ಅನುಮೋದನೆ ಇಲ್ಲದೆ ಮರಣ ಹೊಂದಿದ ನೌಕರರ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕು, ವರ್ಗಾವಣೆಗೆ ಅವಕಾಶ ನೀಡಬೇಕು, ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸ ನಿಗದಿಪಡಿಸಬೇಕು, ಗ್ರಾ.ಪಂ.ಗಳಲ್ಲಿ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ ಅವರು, ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ೨೦೦ ಮಂದಿ ಭಾಗವಹಿಸಲಿದ್ದು, ಉಳಿದವರು ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸುಂಟಿಕೊಪ್ಪ ಪೌರಕಾರ್ಮಿಕ ರಂಗಸ್ವಾಮಿ ಹಾಜರಿದ್ದರು.