ಮಡಿಕೇರಿ, ಜ. ೩೧: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನೇರಪಾವತಿಗೊಳಪಡಿಸಿ ಹಂತಹAತವಾಗಿ ಖಾಯಂ ಗೊಳಿಸುವಂತೆ ಒತ್ತಾಯಿಸಿ ತಾ. ೧ ರಿಂದ (ಇಂದಿನಿAದ) ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಡಾಟ ಆಪರೇಟರ್ಗಳನ್ನು ಗುತ್ತಿಗೆಯಲ್ಲಿಯೇ ಉಳಿಸಿಕೊಂಡು ತಾರತಮ್ಯ ಮಾಡಿದೆ. ಇದನ್ನು ಖಂಡಿಸಿ ತಾ. ೧ ರಂದು ರಾಜ್ಯಾದ್ಯಂತ ಕುಡಿಯುವ ನೀರು ಹಾಗೂ ಸ್ವಚ್ಛತೆ ಕೆಲಸ ಸ್ಥಗಿತಗೊಳಿಸಲಾಗುವುದು. ಸರಕಾರ ಸಮಸ್ಯೆ ಬಗೆಹರಿಸಿ ಸೂಕ್ತ ಕ್ರಮವಹಿಸುವ ತನಕ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ ಅವರು, ನೀರು ಪೂರೈಕೆಗೆ ಮಾತ್ರ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮಿಂದ ಸಾರ್ವಜನಿಕರಿಗೆ ತೊಂದರೆ ಯಾಗಬಾರದು ಎಂಬ ದೃಷ್ಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಸ ವಿಲೇವಾರಿಯಾಗದೇ ದೊಡ್ಡ ಮಟ್ಟದ ಸಮಸ್ಯೆ ಎದುರಾದಲ್ಲಿ ಅದಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಾವು ಕೆಲಸ ಸ್ಥಗಿತಗೊಳಿಸುವು ದರಿಂದ ನೀರು ಪೂರೈಕೆ ಹಾಗೂ ಕಸ ವಿಲೇವಾರಿ ಸಮಸ್ಯೆ ಉಂಟಾಗುತ್ತದೆ. ಸಾರ್ವಜನಿಕರು ಅಧಿಕಾರಿಗಳಿಗೆ ಯಾವುದೇ ರೀತಿ ತೊಂದರೆ ನೀಡದಂತೆ ಈರಪ್ಪ ಶೆಟ್ಟಿ ಕೋರಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಎ. ಬೋಪಯ್ಯ, ಕಾರ್ಯದರ್ಶಿ ಟಿ.ಬಿ. ರಮೇಶ್ ಕುಟ್ಟಪ್ಪ, ಖಜಾಂಜಿ ಕಬೀರ್ ಅಹಮ್ಮದ್, ಸಂಚಾಲಕ ಮಹಾದೇವ್, ನೀರು ಸರಬರಾಜು ವಿಭಾಗದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಾಜರಿದ್ದರು.