ಸಿದ್ದಾಪುರ, ಜ. ೩೧ : ಸಿದ್ದಾಪುರದ ಗ್ರಾ.ಪಂ.ನ ೨೦೨೧-೨೨ ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ ಯ ಅಧ್ಯಕ್ಷೆ ತೀತಮಾಡ ರೀನಾ ತುಳಸಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಸಮ್ಮದ್ ಮಾತನಾಡಿ ಸಿದ್ದಾಪುರ ಗ್ರಾ.ಪಂ.ನಲ್ಲಿ ೨೫ ಮಂದಿ ಸದಸ್ಯರುಗಳಿದ್ದು, ಈ ಪೈಕಿ ಇಂದಿನ ಗ್ರಾಮ ಸಭೆಗೆ ಅರ್ಧದಷ್ಟು ಮಂದಿ ಸದಸ್ಯರುಗಳು ಹಾಜರಾಗಿದ್ದು, ಇದು ಸರಿಯಾದ ಕ್ರಮವಲ್ಲ ಎಂದರು. ಗ್ರಾಮಸ್ಥರಿಂದ ಆಯ್ಕೆಯಾದ ಸದಸ್ಯರುಗಳೇ ಗ್ರಾಮ ಸಭೆಗೆ ಆಗಮಿಸದೇ ಇರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ ಮಾಜಿ ಸದಸ್ಯ ಎಂ.ಹೆಚ್ ಮೂಸ ಮಾತನಾಡಿ ಸಿದ್ದಾಪುರ ಪಟ್ಟಣದ ಸುತ್ತಮುತ್ತ ದಿನದಿಂದ ದಿನಕ್ಕೆ ಗಾಂಜಾ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ.
ಗಾಂಜಾ ಮಾರಾಟವಾಗುತ್ತಿದ್ದರೂ; ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಿದ್ದಾಪುರದ ಎಂ.ಜಿ ರಸ್ತೆಯಲ್ಲಿ ಗ್ರಾ.ಪಂ ವತಿಯಿಂದ ರೂ. ೧೩ ಲಕ್ಷ ವೆಚ್ಚದಲ್ಲಿ ಪಟ್ಟಣದ ಮಾಂಸ ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಆ ಮಳಿಗೆಗಳಲ್ಲಿ ಕಸದ ರಾಶಿ ತುಂಬಿಸಲಾಗಿದ್ದು, ದುರ್ನಾತ ಬೀರುತ್ತಿದೆ ಎಂದು ಮೂಸಾ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಹೆಚ್.ಬಿ ರಮೇಶ್ ಮಾತನಾಡಿ ಬೇರೆ ಊರುಗಳಲ್ಲಿ ಕೋಳಿ ಮಾಂಸದ ದರವು ಕಡಿಮೆಯಾಗಿದ್ದು, ಸಿದ್ದಾಪುರದಲ್ಲಿ ಪ್ರತಿನಿತ್ಯವೂ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಲ್ಲದೇ ಸಿದ್ದಾಪುರವು ವೀರಾಜಪೇಟೆ ತಾಲೂಕಿಗೆ ಸೇರಿದ್ದೂ, ಶಿಕ್ಷಣ ಇಲಾಖೆಗೆ ಸಂಬAಧಿಸಿದ ಎಲ್ಲಾ ವ್ಯವಹಾರಗಳು ಹಾಗೂ ಶಾಲೆಗಳ ಕಡತಗಳು ಮಡಿಕೇರಿ ತಾಲೂಕಿಗೆ ಸೇರಿರುತ್ತದೆ. ಈ ಗೊಂದಲದ ಬಗ್ಗೆ ಹಲವಾರು ವರ್ಷಗಳಿಂದ ಪ್ರಸ್ತಾಪಿಸಿದ್ದರೂ ಕೂಡ ಈವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಭೆಯ ಗಮನ ಸೆಳೆದರು. ಎಂ.ಜಿ ರಸ್ತೆಯ ನಿವಾಸಿ ರೆಹಮಾನ್ ಮಾತನಾಡಿ ಮಾರುಕಟ್ಟೆ ಭಾಗದಲ್ಲಿರುವ ದೊಡ್ಡಿಯಿಂದಾಗಿ ಅಶುಚಿತ್ವ ತಾಂಡವವಾಡುತ್ತಿದೆ.
ಇಲ್ಲಿ ಸ್ವಚ್ಛ ಮಾಡುವ ಮಾಂಸದ ತ್ಯಾಜ್ಯಗಳನ್ನು ನಾಯಿಗಳು ಕಚ್ಚಿಕೊಂಡು ಹೋಗಿ ಸಾರ್ವಜನಿಕ ರಸ್ತೆಯಲ್ಲಿ ಹಾಕುತ್ತಿದ್ದು, ಇದರಿಂದಾಗಿ ದುರ್ನಾತ ಬೀರುತ್ತಿದ್ದು, ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ದೊಡ್ಡಿಯನ್ನು ಮುಚ್ಚುವಂತೆ ಒತ್ತಾಯಿಸಿದರು. ಎನ್.ಕೆ ಅನಿಲ್ ಮಾತನಾಡಿ ಕೂಡುಗದ್ದೆ, ಗುಹ್ಯ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಗಾಂಜಾ ವ್ಯಸನಿಗಳು ರಸ್ತೆಯಲ್ಲೇ ಸುತ್ತಾಡುತ್ತಾ ದಾಂಧಲೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗುಹ್ಯ ಕಕ್ಕಟ್ಟುಕಾಡು ಗ್ರಾಮದ ನಿವಾಸಿ ಪಿ.ಕೆ ಚಂದ್ರನ್ ಮಾತನಾಡಿ ಮಹಾಮಳೆಗೆ ಸಿಲುಕಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಈವರೆಗೂ ಸಮರ್ಪಕವಾಗಿ ಪರಿಹಾರದ ಹಣ ದೊರೆತ್ತಿಲ್ಲ. ಹಲವಾರು ಮಂದಿ ಸಂತ್ರಸ್ತ ಕುಟುಂಬಗಳ ಮನೆಗಳ ಕೆಲಸಗಳು ಅರ್ಧದಲ್ಲೇ ನಿಂತಿದೆ ಎಂದರು. ಎ.ಎಸ್ ಮುಸ್ತಫ ಮಾತನಾಡಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳು ಹೆಚ್ಚಾಗಿದ್ದರೂ ಕೂಡ ಈ ಭಾಗದಲ್ಲಿ ಸಾರ್ವಜನಿಕ ಮೈದಾನವಿಲ್ಲವಾಗಿದೆ. ಮೈದಾನ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಕೂಡ ಈವರೆಗೆ ಜಿಲ್ಲಾಡಳಿತ ಸ್ಪಂದಿಸಿಲ್ಲವೆAದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರ ವ್ಯಾಪ್ತಿಯ ಎಲ್ಲಾ ಸ್ಮಶಾನಗಳ ಜಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದರು. ಪ್ರವೀಣ್ ಮಾತನಾಡಿ ಸಿದ್ದಾಪುರದ ಹಳೆಯ ಕಾಲದ ಸರ್ಕಾರಿ ಮಲೆಯಾಳಂ ಪ್ರಾಥಮಿಕ ಶಾಲೆಯನ್ನು ಇದೀಗ ಕನ್ನಡ ಮಾಧ್ಯಮಕ್ಕೆ ವರ್ಗಾವಣೆ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಇದರಿಂದಾಗಿ ಮಲೆಯಾಳಿ ಭಾಷಿಕರಿಗೆ ಇದ್ದಂತಹ ಏಕೈಕ ಮಲೆಯಾಳಂ ಶಾಲೆ ಮುಚ್ಚುವ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಮಲೆಯಾಳಂ ಶಾಲೆಯಾಗಿ ಮುಂದುವರೆಸಬೇಕೆAದು ಒತ್ತಾಯಿಸಿದರು.
ವಿ.ಕೆ ಬಶೀರ್ ಮಾತನಾಡಿ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಕಸ ವಿಲೇವಾರಿಗೆ ಜಾಗವನ್ನು ಕಲ್ಪಿಸಿಕೊಡುವಂತೆ ಕಂದಾಯ ಇಲಾಖೆಯನ್ನು ಒತ್ತಾಯಿಸಿದರು. ಅಲ್ಲದೇ ಸಿದ್ದಾಪುರ ಗ್ರಾ.ಪಂ.ಗೆ ಖಾಯಂ ಪಿಡಿಓ ನೇಮಕ ಮಾಡಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರು ಮಾತನಾಡಿ ಈ ಹಿಂದೆ ಶಾಲೆಗಳ ಬಳಿ ಸಂಜೆಯ ಸಮಯದಲ್ಲಿ ಹಾಗೂ ಬೆಳಗ್ಗಿನ ಜಾವ ಪೋಲೀಸರನ್ನು ನಿಯೋಜಿಸಲಾಗುತಿತ್ತು. ಆದರೆ ಇದೀಗ ಪೊಲೀಸರು ಶಾಲೆಗಳ ಬಳಿ ಇಲ್ಲದ ಕಾರಣ ಸಮಸ್ಯೆಗಳು ಎದುರಾಗುತ್ತಿವೆೆ ಎಂದು ಪ್ರಸ್ತಾಪಿಸಿದರು. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದರೂ ಕೂಡ ಇಂದಿನ ಗ್ರಾಮ ಸಭೆಗೆ ಅರಣ್ಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಪಂಚಾಯಿತಿ ವತಿಯಿಂದ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಗ್ರಾ.ಪಂ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳ ಕಾಮಗಾರಿಗಳನ್ನು ಕೆ.ಜಿ ಬೋಪಯ್ಯ ಅವರ ಕಾಳಜಿಯಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಮಾಡಲಾಗಿದೆ. ಮತ್ತಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಮುಂದಿನ ಟೆಂಡರ್ನ ಬಳಿಕ ಸಿದ್ದಾಪುರದಲ್ಲಿ ಇತರ ಊರುಗಳಲ್ಲಿ ಮಾರಾಟ ಮಾಡುವ ದರಗಳಿಗೆ ಕೋಳಿ ಮಾಂಸವನ್ನು ಮಾರಾಟ ಮಾಡುವಂತೆ ಗುತ್ತಿಗೆದಾರರಿಗೆ ಷರತ್ತುಗಳನ್ನು ವಿಧಿಸಲಾಗುವುದೆಂದು ಮಾಹಿತಿ ನೀಡಿದರು. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ರಾಜೇಶ್ ಹಾಗೂ ಸಿದ್ದಾಪುರ ಪಿಡಿಓ ಮನ್ಮೋಹನ್, ಕಾರ್ಯದರ್ಶಿ ಮೋಹನ್, ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. -ವಾಸು