ಮಡಿಕೇರಿ, ಜ. ೩೦: ಬೆಂಗಳೂರಿನಲ್ಲಿ ನಿನ್ನೆ ನಡೆದ ರಸ್ತೆ ಅವಘಡವೊಂದರಲ್ಲಿ ಜಿಲ್ಲೆಯ ಯುವತಿ ಯೋರ್ವರು ಮೃತ ಪಟ್ಟಿರುವ ಘಟನೆ ವರದಿಯಾಗಿದೆ.

ಮೂಲತಃ ಜಿಲ್ಲೆಯ ಬಿ. ಶೆಟ್ಟಿಗೇರಿಯವರಾದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕರ್ತುರ ರಕ್ಷಿತ್ ಎಂಬವರ ಪತ್ನಿ ಗಂಗಮ್ಮ (ಗಂಗ-೨೮-ತಾಮನೆ: ಮಗ್ಗುಲ ಪುಲಿಯಂಡ) ಅವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಪತಿ-ಪತ್ನಿಯರಿಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಯಲಹಂಕದಲ್ಲಿ ವಾಸವಾಗಿದ್ದರು. ನಿನ್ನೆ ಅಪರಾಹ್ನ ನಿವೇಶನವೊಂದರ ಖರೀದಿಗೆಂದು ಜಾಗ ವೀಕ್ಷಿಸಲು ಬಿಲ್ಡರ್ ಒಬ್ಬರ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ದೊಡ್ಡಬಳ್ಳಾಪುರ ರಸ್ತೆ ಜಂಕ್ಷನ್‌ನಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿAದ ಬಂದ ಟಾಟಾ ಎಸ್ ವಾಹನ ಡಿಕ್ಕಿಯಾಗಿದೆ. ಘಟನೆಯಿಂದ ಕಾರು ಮಗುಚಿಕೊಂಡಿದ್ದು, ಹಿಂಬದಿಯಲ್ಲಿದ್ದ ಗಂಗ ಅವರು ರಸ್ತೆಗೆ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಗಂಗ ಅವರ ಪತಿ ರಕ್ಷಿತ್ ಅವರಿಗೂ ಗಂಭೀರ ಪೆಟ್ಟಾಗಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗ ಅವರ ಮೃತದೇಹವನ್ನು ಹೆಬ್ಬಾಳದ ಶವಾಗಾರದಲ್ಲಿರಿಸಲಾಗಿದೆ. ಅವರ ಸಹೋದರ ನ್ಯೂಜಿಲ್ಯಾಂಡ್‌ನಲ್ಲಿದ್ದು, ಅವರು ಅಲ್ಲಿಂದ ಆಗಮಿಸಿದ ಬಳಿಕ ಫೆಬ್ರವರಿ ೧ ಅಥವಾ ೨ಕ್ಕೆ ಬಿ. ಶೆಟ್ಟಿಗೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮೃತರು ಮೂರೂವರೆ ವರ್ಷ ಪ್ರಾಯದ ಮಗುವನ್ನು ಅಗಲಿದ್ದು, ಈ ಘಟನೆ ಆಪ್ತ ವರ್ಗದಲ್ಲಿ ತೀವ್ರ ಶೋಕಕ್ಕೆ ಎಡೆಯಾಗಿದೆ. ಘಟನೆ ಬಗ್ಗೆ ದೊಡ್ಡಬಳ್ಳಾಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.