ಮುಳ್ಳೂರು, ಜ. ೨೯: ಸಮೀಪದ ದುಂಡಳ್ಳಿ ಗ್ರಾ.ಪಂ.ಯ ೨೦೨೨-೨೩ನೇ ಸಾಲಿನ ಗ್ರಾಮಸಭೆ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಪ್ರಾರಂಭದಲ್ಲಿ ಗ್ರಾಮಸ್ಥರಾದ ಮುತ್ತೇಗೌಡ ೨೦೨೨ನೇ ಸಾಲಿನಲ್ಲಿ ಜಮಾಬಂದಿ ಸಭೆ ನಡೆಸಿಲ್ಲ ಮತ್ತು ಜಮಾ-ಖರ್ಚಿನ ವಿವರವನ್ನು ಗ್ರಾಮಸ್ಥರಿಗೆ ಕೊಡಬೇಕಾಗಿತ್ತು ಎಂದು ಆಕ್ಷೇಪ ಎತ್ತಿದರು. ಇದರಿಂದ ಸಭೆಯಲ್ಲಿ ಪ್ರಾರಂಭದಲ್ಲೇ ಸದ್ದುಗದ್ದಲ ಹೆಚ್ಚಾಯಿತು. ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಯುವಕರು ಹಲವಾರು ವರ್ಷಗಳಿಂದ ಆಟವಾಡುತ್ತಿದ್ದ ಮೈದಾನವನ್ನು ಸ್ಮಶಾನ ಜಾಗವನ್ನಾಗಿ ಮಾಡುವ ಯತ್ನ ನಡೆಯುತ್ತಿದ್ದು ಗ್ರಾ.ಪಂ.ಯವರು ಈ ಜಾಗವನ್ನು ಸ್ಮಶಾನ ಜಗವನ್ನಾಗಿ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಗ್ರಾಮಸ್ಥ ರಕ್ಷಿತ್ ಮನವಿ ಮಾಡಿದರು. ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಗ್ರಾಮಸ್ಥ ಪ್ರಸಾದ್, ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಖಾಸಗಿಯವರು ಗ್ರಾ.ಪಂ. ಮೂಲಕ ಪರವಾನಿಗೆ ಪಡೆದು ಮಾಂಸ ಮಾರಾಟ ಮಳಿಗೆ ಹಾಕಿಕೊಂಡಿದ್ದಾರೆ. ಇದನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿ ಗ್ರಾ.ಪಂ.ಯನ್ನು ಅಭಿವೃದ್ಧಿ ಪಡಿಸಲು ಪಿಡಿಓ ಅವರು ಹಿಂದೇಟು ಹಾಕುತ್ತಿದ್ದು ಇವರಿಗೆ ಇಚ್ಚಾಸಕ್ತಿಯ ಕೊರತೆ ಇದೆ ಎಂದು ಗ್ರಾ.ಪಂ. ಸದಸ್ಯ ದೇವರಾಜ್ ಸಭೆಯಲ್ಲಿ ಪಿಡಿಓ ವಿರುದ್ಧವೇ ಆಕ್ಷೇಪ ಮಾಡಿದ ಘಟನೆಯೂ ನಡೆಯಿತು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ತಾ.ಪಂ. ಅಧಿಕಾರಿ ಕಾಳ ನಾಯಕ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್, ಪಿಡಿಓ ರಾಜೇಂದ್ರ ಗ್ರಾ.ಪಂ. ಸದಸ್ಯರು, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.