ಸಿದ್ದಾಪುರ, ಜ. ೨೯: ಚೆಟ್ಟಳ್ಳಿ ಕ್ಲಸ್ಟರ್ ಮಟ್ಟದ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕಲಿಕೋತ್ಸವಕ್ಕೆ ಚೆಟ್ಟಳ್ಳಿಯಲ್ಲಿ ಸಂಭ್ರಮ ಸಡಗರದ ಚಾಲನೆ ದೊರಕಿತು. ರಾಜ್ಯ ಸರಕಾರದ ಸಮಗ್ರ ಶಿಕ್ಷಣ ಯೋಜನೆಯಡಿ ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಡಗು, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೊಡಗು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಟ್ಟಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಇಸಿಓ ಮಾರುತಿ ಅರೇರಾ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕಲಿಕೋತ್ಸವವು ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಮಕ್ಕಳನ್ನು ವಿವಿಧ ಚಟುವಟಿಕೆಯ ಮೂಲಕ ಕಲಿಸುವ ಉದ್ದೇಶ ಹೊಂದಿದೆ. ಮಕ್ಕಳು ಸಂಭ್ರಮ ಸಡಗರದಿಂದ ಕಲಿಯುವ ಪಾಠಗಳು ಅವರ ಮನದಾಳದಲ್ಲಿ ಬಹಳ ಕಾಲ ಉಳಿಯಲಿದೆ. ಆದ್ದರಿಂದ ಸರಕಾರ ಈ ವಿನೂತನ ಪ್ರಯೋಗ ಮಾಡಿದೆ.

ಪೋಷಕರು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿ ಕೊಂಡು, ಮಕ್ಕಳ ಕಲಿಕೆಗೆ ಸಂಪೂರ್ಣ ಸಹಕಾರ ನೀಡಬೇಕೆಂದರು. ಜಿಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಭ್ಯತ್‌ಮಂಗಲ, ಗುಹ್ಯ, ಮಾದರಿ ಪ್ರಾಥಮಿಕ ಮತ್ತು ಮಲಯಾಳಂ ಶಾಲೆ ಸಿದ್ದಾಪುರ, ಆರ್ ಎಸ್ ಚೆಟ್ಟಳ್ಳಿ, ಕಂಡಕರೆ ಮತ್ತು ಚೆಟ್ಟಳ್ಳಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಆವರಣದಿಂದ ಮೆರವಣಿಗೆ ತೆರಳಿದ ವಿದ್ಯಾರ್ಥಿಗಳು ಚೆಟ್ಟಳ್ಳಿ ಪಟ್ಟಣದಲ್ಲಿ ಕಲಾ ಕವಾಯತ್ತು ಪ್ರದರ್ಶನ ತೋರಿದರು.

ಕಾರ್ಯಕ್ರಮದಲ್ಲಿ ಇಸಿಓ ಮಾರುತಿ ಅರೇರಾ, ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಪಂ ಅಧ್ಯಕ್ಷ ಪಿ.ಟಿ. ಮುತ್ತಪ್ಪ, ಉಪಾಧ್ಯಕ್ಷೆ ವಿಮಲಾಕ್ಷಿ, ಸದಸ್ಯರಾದ ಮಾಲಾಶ್ರೀ, ಸಿಂಧು, ಸುಮಿತ್ರ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಮುಖ್ಯ ಶಿಕ್ಷಕಿ ರಮಾ, ವಿವಿಧ ಶಾಲೆಯ ಶಿಕ್ಷಕರು ಮತ್ತು ಪೋಷಕರು ಇದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಅಶೋಕ್ ಸ್ವಾಗತಿಸಿದರು.