(ಕೆ.ಎA ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜ. ೨೯: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ‘ಕಪ್ಪು ಚಿನ್ನ’ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಕೊಯ್ಲು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಪ್ರಾರಂಭಗೊಳ್ಳುತ್ತದೆ. ಆದರೆ, ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಅಕಾಲಿಕ ಮಳೆಗೆ ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ಬಳ್ಳಿಗಳು ಒಣಗಿ, ಸಂಪೂರ್ಣ ನಾಶವಾಗಿ ಹೋಗುತ್ತಿವೆ.

ಆರೋಗ್ಯವಂತ ಬಳ್ಳಿಗಳು ರೋಗಕ್ಕೆ ತುತ್ತಾಗುತ್ತಿದ್ದು, ಬಳ್ಳಿಗಳು ಒಣಗಿ, ಅದರಲ್ಲಿರುವ ಕಾಳುಮೆಣಸು ಉದುರುತ್ತಿದೆ. ಇದರ ಮಧ್ಯೆ ಕರಿಮೆಣಸು ಕೊಯ್ಲಿಗೆ ಬಂದಿದ್ದು, ಬೆಳೆಗಾರರಿಗೆ ಕೊಯ್ಲು ಮಾಡಲು ಕಾರ್ಮಿಕರ ಸಮಸ್ಯೆ ಎದುರಾಗಿದೆ.

ದುಬಾರಿ ಸಂಬಳ: ಕರಿಮೆಣಸು ಕೊಯ್ಲು ಮಾಡಲು ಕಾರ್ಮಿಕರಿಗೆ ದಿನಕ್ಕೆ ೮೦೦ ರಿಂದ ೮೫೦ ರೂವರೆಗೆ ಸಂಬಳ ನೀಡಬೇಕಾದ ಅನಿವಾರ್ಯತೆ ಇದೆ. ಕೋವಿಡ್‌ಗಿಂತ ಮುಂಚೆ ಹೊರಜಿಲ್ಲೆ ಹಾಗೂ ಹೊರರಾಜ್ಯದ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ಕರಿಮೆಣಸು ಕೊಯ್ಲಿನಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಲಾಕ್‌ಡೌನ್‌ನಿಂದ ಮನೆ ಸೇರಿದ ಹೊರರಾಜ್ಯದ ಬಹುತೇಕ ಕಾರ್ಮಿಕರು ಜಿಲ್ಲೆಗೆ ಹಿಂತಿರುಗಲಿಲ್ಲ.

ಕಾಳುಮೆಣಸು ಬೆಳೆಗಾರರು ಜಿಲ್ಲೆಯ ಸ್ಥಳೀಯ ಕಾರ್ಮಿಕರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳೀಯ ಕಾರ್ಮಿಕರಿಗೆ ದಿನಕ್ಕೆ ರೂ. ೮೫೦ ಕೂಲಿ ನೀಡಿದರೂ ಕೂಡ ಕರಿಮೆಣಸು ಕೊಯ್ಲಿಗೆ ಕಾರ್ಮಿಕರು ಬರುತ್ತಿಲ್ಲ ಎಂದು ಬೆಳೆಗಾರರೊಬ್ಬರು ತಿಳಿಸಿದ್ದಾರೆ.

ಇದೀಗ ಕರಿಮೆಣಸು ಪ್ರತಿ ಕೆ.ಜಿ.ಗೆ ರೂ. ೪೯೫ ಇದೆ. ಕಳೆದ ಎರಡು ವರ್ಷದ ಹಿಂದೆ ಕಾಳುಮೆಣಸಿಗೆ ಪ್ರತಿ ಕೆಜಿಗೆ ಬರೀ ರೂ. ೩೫೦ ಮಾತ್ರ ಇತ್ತು. ಇತ್ತೀಚಿನ ದಿನಗಳಲ್ಲಿ ತೋಟದ ನಿರ್ವಹಣೆ ವೆಚ್ಚ ಅಧಿಕವಾಗಿದೆ.

ಆದರೆ ಕರಿಮೆಣಸು ಬೆಲೆಯಲ್ಲಿ ಯಾವುದೇ ಹೆಚ್ಚಳ ಕಾಣುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಕೆಜಿಗೆ ರೂ. ೮೫೦ ದೊರೆತರೆ ಮಾತ್ರ ಬೆಳೆಗಾರರು ಲಾಭ ಗಳಿಸಲು ಸಾಧ್ಯ.

ಜಿಲ್ಲೆಯ ಎಲ್ಲಾ ತೋಟಗಳ ಮರಗಳಿಗೆ ಕರಿಮೆಣಸು ಬಳ್ಳಿಗಳನ್ನು ಹಬ್ಬಿಸಿ ಬೆಳೆಗಾರರು ಫಸಲು ತೆಗೆಯುತ್ತಿದ್ದರು. ಹವಾಮಾನ ವೈಪರಿತ್ಯ, ಬೆಲೆ ಕುಸಿತಕ್ಕೆ ತುತ್ತಾಗಿ ಕಂಗಾಲಾಗಿದ್ದ ಕಾಫಿ ಬೆಳೆಗಾರರನ್ನು ಕರಿಮೆಣಸು ರಕ್ಷಿಸುತ್ತಿತ್ತು. ಕಾಫಿ ಬೆಳೆಯಲ್ಲಿ ಉಂಟಾದ ನಷ್ಟವನ್ನು ಕರಿಮೆಣಸು ಬೆಳೆಯಲ್ಲಿ ಬೆಳೆಗಾರರು ಸರಿದೂಗಿಸುತ್ತಿದ್ದರು.

ಆದರೆ ಕಳೆದ ಐದು ವರ್ಷಗಳಿಂದ ವಿಯೆಟ್ನಾಂನಿAದ ಕರಿಮೆಣಸು ಆಮದು ಪ್ರಕ್ರಿಯೆಯಿಂದ ನಿರಂತರವಾಗಿ

(ಮೊದಲ ಪುಟದಿಂದ) ಕರಿಮೆಣಸು ಧಾರಣೆಯಲ್ಲಿ ಕುಸಿತಗೊಂಡು, ಕಾಳುಮೆಣಸು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ತಿಂಗಳು ಕರಿಮೆಣಸು ಕೊಯ್ಲು ಪ್ರಾರಂಭಗೊಳ್ಳುತ್ತದೆ. ಆದರೆ ಬೆಳೆಗಾರರಿಗೆ ಕರಿಮೆಣಸು ಸೂಕ್ತ ಸಮಯದಲ್ಲಿ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ ಎಂಬುದೇ ದೊಡ್ಡ ಚಿಂತೆಯಾಗಿದೆ.ಆರೋಗ್ಯವAತ ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು, ರೋಗಪೀಡಿತ ಬಳ್ಳಿಗಳನ್ನು ಬುಡಸಮೇತ ಕಿತ್ತು ದೂರದ ಪ್ರದೇಶಗಳಿಗೆ ಸಾಗಿಸಿ ನಾಶಮಾಡಬೇಕು. ಬಳ್ಳಿಗಳ ಬೇರುಗಳಿಗೆ ಗಾಯವಾಗದಂತೆ ಎಚ್ಚರ ವಹಿಸಬೇಕು. ಕಳಪೆ ಗುಣಮಟ್ಟದ ಗೊಬ್ಬರ, ಶಿಲೀಂದ್ರ ನಾಶಕಗಳನ್ನು ಸಿಂಪಡಿಸಬಾರದು.

-ಡಾ. ವೀರೇಂದ್ರ ಕುಮಾರ್, ಕೀಟತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ.

ಆರೋಗ್ಯವಂತ ಕಾಳುಮೆಣಸು ಬಳ್ಳಿಗಳಿಗೆ ರೋಗ ಹರಡುತ್ತಿದೆ. ಪ್ರತಿ ವರ್ಷ ಹೆಚ್ಚು ಹೆಚ್ಚು ಕರಿಮೆಣಸು ಬಳ್ಳಿಗಳು ಸಾಯುತ್ತಿವೆ. ಅದರ ಮಧ್ಯೆ ಬೆಲೆ ಕುಸಿತವಾಗುತ್ತಿದೆ. ದುಬಾರಿ ಸಂಬಳ ನೀಡಿ ಕರಿಮೆಣಸು ಕೊಯ್ಲು ಮಾಡಬೇಕಾಗಿದೆ.

-ಉನೈಸ್ ಕೆ.ಎಂ., ಕರಿಮೆಣಸು ವ್ಯಾಪಾರಿ, ಚೆಟ್ಟಳ್ಳಿ.