ಭಾಗಮಂಡಲ, ಜ. ೨೯: ಸಹಕಾರಿ ಕ್ಷೇತ್ರ ಉಳಿದರೆ ಮಾತ್ರ ರೈತ ಉಳಿಯುತ್ತಾನೆ. ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಲು ಸರ್ಕಾರ ವಿನೂತನ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಸಮೀಪದ ಚೇರಂಬಾಣೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಹಕಾರಿ ಬ್ಯಾಂಕುಗಳಿಗೆ ನಬಾರ್ಡ್ ಸಹಾಯಧನವನ್ನು ನೀಡುತ್ತಿದೆ. ಸದಸ್ಯರು ಸಹಕಾರಿ ಬ್ಯಾಂಕುಗಳ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಮಾತನಾಡಿ ವಿದೇಶಗಳಲ್ಲಿ ಯಾಂತ್ರಿಕೃತ ಕೃಷಿ ನಡೆಯುತ್ತಿದೆ. ಬೆಟ್ಟಗುಡ್ಡ ಗುಡ್ಡಗಳಿಂದ ಕೂಡಿದ ಜಿಲ್ಲೆಯಲ್ಲಿ ಯಾಂತ್ರಿಕೃತ ಕೃಷಿ ಕಷ್ಟ ಸಾಧ್ಯವಾದರೂ ಬೆಳೆಗಾರರು ತಂತ್ರಜ್ಞಾನ ಹಾಗೂ ಯಂತ್ರಗಳನ್ನು ಬಳಸಿ ಕೃಷಿ ಕೈಗೊಳ್ಳಬೇಕಿದೆ .ಸಹಕಾರ ಸಂಘಗಳಿAದ ಸಿಗುವ ಸಹಾಯಧನ ವನ್ನು ಬಳಕೆ ಮಾಡಿಕೊಂಡು ಕೃಷಿಗೆ ಪೂರಕವಾದ ಎಲ್ಲಾ ಪರಿಕರಗಳು ಯಂತ್ರೋಪಕರಣಗಳು ಸಹಕಾರಿ ಸಂಘಗಳಲ್ಲಿ ಲಭಿಸುತ್ತಿದ್ದು, ಬೆಳೆಗಾರರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಅಪ್ಪಚೆಟ್ಟೊಳಂಡ ಮನು ಮುತ್ತಪ್ಪ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ರೈತರು ತತ್ತರಿಸುತ್ತಿದ್ದಾರೆ. ಸಹಕಾರಿ ಸಂಘಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ರೈತರ ಪರವಾಗಿ ಸರ್ಕಾರ ಸ್ಪಂದಿಸುತ್ತಿದ್ದು ಬೆಳೆಗಾರರ ಸಾಲ ಮನ್ನಾ ಮಾಡಿದಲ್ಲಿ ರೈತರು ಯಶಸ್ಸು ಕಾಣಲು ಸಾಧ್ಯ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಪಿ. ಸುಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಹೊಸೂರು ಜೆ. ಸತೀಶ್ ಕುಮಾರ್, ಕಿಮ್ಮುಡಿರ ಎ. ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪೊಡನೋಳನ ಟಿ. ಶ್ರೀನಿವಾಸ್, ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಯಶೋಧ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್, ಸಹಾಯಕ ನಿಬಂಧಕ ಎಂ.ಇ. ಮೋಹನ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಚೇರಂಬಾಣೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊಟ್ಟುಕತ್ತೀರ ಎಂ. ಪೂವಯ್ಯ, ಕೇಕಡ ಸುಗುಣ, ನಡುವಟ್ಟೀರ ಅನಂತ್, ಅಳಮಂಡ ಗಣಪತಿ, ಎಸ್. ತಿಮ್ಮಯ್ಯ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕೊದಂಡೇರ ಪಿ. ಬಾಂಡ್ ಗಣಪತಿ ಅವರನ್ನು ಸನ್ಮಾನಿಸಲಾಯಿತು.