ಗೋಣಿಕೊಪ್ಪ ವರದಿ, ಜ. ೨೯: ಕೊಡಗು ದೈವಗಳ ಮೂಲ ಸ್ಥಾನ ಬೈತೂರು ವಾರ್ಷಿಕ ಹಬ್ಬ ಗುರುವಾರ ಸಂಪನ್ನಗೊAಡಿತು. ಬುಧವಾರ ನಡೆದ ಪನಂದೂಟ್ ಆಚರಣೆಯಲ್ಲಿ ಕೊಡಗಿನ ದೇವರುಗಳಿಗೆ ಬೈತೂರಚ್ಚ ಅನುವಾದ ನೀಡುವ ಮೂಲಕ ಶಕ್ತಿ ನೀಡುವ ಕಾರ್ಯ ನಡೆಯಿತು. ಹಬ್ಬದ ಕೊನೆಯ ದಿನ ಆದಿ ಬೈತೂರಪ್ಪ ಭವನದ ಸಮೀಪವಿರುವ ಸ್ಥಾನದಲ್ಲಿ ಆರಾಟ್ ನಮ್ಮೆ ಆಚರಣೆಯೊಂದಿಗೆ ಹಬ್ಬ ಸಂಪನ್ನಗೊAಡಿತು. ಪನಂದೂಟ್ ಆಚರಣೆಯಲ್ಲಿ ಜಿಲ್ಲೆಯ ೩೦೦ಕ್ಕೂ ಹೆಚ್ಚು ದೇವರುಗಳು ದರ್ಶನ ನೀಡಿದವು. ತಿರುವಳಕಾರ ಹೊಳೆಯಲ್ಲಿ ಸ್ನಾನ ಮಾಡಿ ಬರುವಾಗ ಅವರ ಮೈಮೇಲೆ ದೇವರು ಬಂದು ಬೈತೂರಚ್ಚನೆದುರು ನಿಂತು ಬೇಡಿಕೊಂಡಿತು. ತನ್ನದೇ ಆದ ಉಡುಪು, ಗೆಜ್ಜೆ ತಂಡ್ನ ಗಿಜಿ-ಗಿಜಿ ಶಬ್ದ, ಕೂಗಾಟ, ನರ್ತನೆ, ಬೈತೂರಚ್ಚಾ ಎಂದು ಗೌರವ ಪದ ಬಳಕೆ ಭಕ್ತಿಭಾವ ಹೆಚ್ಚಿಸಿತು. ಗುರುಕಾರೊಣ, ಭದ್ರಕಾಳಿ, ಅಯ್ಯಪ್ಪ, ಚಾಮುಂಡಿ, ಲಕ್ಷಿö್ಮ ಸೇರಿದಂತೆ ಸಾಕಷ್ಟು ದೇವರುಗಳು ಶಕ್ತಿ ಪಡೆದುಕೊಂಡವು. ಮಲೆಯಾಳಿ ಭಾಷೆಯಲ್ಲಿ ಅಪ್ಪನಿಗೆ ಗೌರವ ನೀಡುವುದು, ರಾಶಿ ಹಾಕಿರುವ ಬೆತ್ತ, ಗೆಜ್ಜೆತಂಡ್, ಕಡತಲೆಯನ್ನು ಮೈಮೇಲೆ ಬರುವ ದೇವರುಗಳು ಆಯಾ ಅವರಿಗೆ ಸೇರಿದ ಮೂಲವಸ್ತುವನ್ನು ಹೆಕ್ಕಿ ತೆಗೆದು ಬೈತೂರಪ್ಪ ದೇವರ ಎದುರು ಪ್ರಾರ್ಥಿಸಿಕೊಂಡವು. ಜಿಲ್ಲೆಯಿಂದ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಆರಾಟ್ ನಮ್ಮೆಯಲ್ಲಿ ದೇವರ ಮೂರ್ತಿ ಹೊತ್ತು ಪ್ರದಕ್ಷಿಣೆ ಹಾಕಲಾಯಿತು. ಈ ಸಂದರ್ಭ ಕೋಮರತಚ್ಚ ಹಬ್ಬದ ಮೂಲ ಮಾಹಿತಿಯನ್ನು ತಿಳಿಸಿತು.
ಹಿನ್ನೆಲೆ: ಡಿಸೆಂಬರ್ ೩೧ ರಂದು ಬೈತೂರಿನಿಂದ ಜಿಲ್ಲೆಯ ಪೆಗ್ಗಳ ದೇವಸ್ಥಾನಕ್ಕೆ ಆಗಮಿಸಿದ ಕೋಮರತಚ್ಚ ಜಿಲ್ಲೆಯ ವಿವಿಧೆಡೆ ತೆರಳಿ ಹಬ್ಬದ ಮಾಹಿತಿಯನ್ನು ಭಕ್ತರಿಗೆ ತಿಳಿಸುವ ಕಾರ್ಯ ನಡೆಯಿತು.
ಪುಗ್ಗೇರ ನಂದಾ ಗಣಪತಿ, ಕೊಳುವಂಡ ಐನ್ಮನೆ, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನ, ದೇವಣಗೇರಿ ಮುಕ್ಕಾಟೀರ ಐನ್ಮನೆ, ಈಶ್ವರ ದೇವಸ್ಥಾನ, ಪುಗ್ಗೇರ ಐನ್ಮನೆ, ಭಗವತಿ ದೇವಸ್ಥಾನ, ಹಾಲುಗುಂದ ಭಗವತಿ ದೇವಸ್ಥಾನ, ಮೈತಾಡಿ ಚಪ್ಪಂಡ ಐನ್ಮನೆ, ಅಯ್ಯಪ್ಪ ದೇವಸ್ಥಾನ, ಐಚೆಟ್ಟೀರ ಐನ್ಮನೆ, ಬೇರೆರ ಕೈಮಡ, ಕುಂಜಿಲಗೇರಿ ಮುಕ್ಕಾಟೀರ ಐನ್ಮನೆ, ಬೊಳ್ಳುಮಾಡ್ ಮಾತಂಡ ಐನ್ಮನೆ, ಬಲ್ಲಚಂಡ ಐನ್ಮನೆ, ಅರಮೇರಿ ಭಗವತಿ ದೇವಸ್ಥಾನ, ಕದನೂರು ಪಾಲೇಕಂಡ ಐನ್ಮನೆ, ಕೆದಮುಳ್ಳೂರು ಈಶ್ವರ ದೇವಸ್ಥಾನ, ಕದನೂರು ಭಗವತಿ, ಮಗ್ಗುಲ ದೇವಸ್ಥಾನ, ಚೋಕಂಡ ಐನ್ಮನೆ, ಅಯ್ಯಪ್ಪ ದೇವಸ್ಥಾನ, ಪುಲಿಯಂಡ ಐನ್ಮನೆ, ಮಡಿಕೇರಿ ಓಂಕಾರೇಶ್ವರ ದೇವಸ್ಥಾನ, ವೀರಾಜಪೇಟೆ ಗಣಪತಿ ದೇವಸ್ಥಾನ, ಮಾಚೇಟೀರ ಮನೆ, ಕಾಮೇಯಂಡ ಮನೆ, ಕೊಡಂದೇರ ಮನೆ, ಮೂರೀರ ಮನೆ, ಅಮ್ಮಣಕುಟ್ಟಂಡ ಮನೆಗೆ ತೆರಳಿ ನಂತರ ಬೈತೂರಿಗೆ ಹಿಂತಿರುಗುವ ಮೂಲಕ ಜಿಲ್ಲೆಯ ಭಕ್ತರನ್ನು ಆಹ್ವಾನಿಸುವ ವಿಶೇಷ ಆಚರಣೆ ನಡೆಯಿತು. ಕೊಡಗಿನ ಭಕ್ತರು ಎಟ್ಟೂಟ್ ಆಚರಣೆಯಿಂದ ಪನಂದೂಟ್ವರೆಗೆ ಪಾಲ್ಗೊಳ್ಳುವ ಹಿನ್ನೆಲೆ ಇದ್ದು, ಜನವರಿ ೨೨ ರಂದು ಎಟ್ಟೂಟ್, ೨೩ ರಂದು ಒಯಿಂಬದೂಟ್, ಜ. ೨೪ ರಂದು ಪತ್ತೂಟ್, ಜ. ೨೫ ರಂದು ಪನಂದೂಟ್ ಆಚರಣೆಯಲ್ಲಿ ಪಾಲ್ಗೊಂಡರು.
ಶ್ರೀ ವಯತ್ತೂರ್ ಕಲಿಯಾರ್ ದೇವಸ್ಥಾನ ಸಮಿತಿ ಮುಖ್ಯಸ್ಥ ಒ.ವಿ. ರಾಜನ್, ಟ್ರಸ್ಟಿಗಳಾದ ಹರಿಚಂದ್ರನ್ ನಂಬಿಯಾರ್, ಪುಗ್ಗೇರ ಪಿ. ಪೊನ್ನಪ್ಪ, ಮಾಳೇಟೀರ ರತ್ನ ಸುಬ್ಬಯ್ಯ, ಹರಿದಾಸ್ ಪಳಿಯತ್ ಇದ್ದರು.