ಪೊನ್ನಂಪೇಟೆ, ಜ. ೨೮: ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವೈದ್ಯರಾದ ಡಾ.ಕಾಳಿಮಾಡ ಶಿವಪ್ಪ ಮಾತನಾಡಿ ಕಾವೇರಿ ಮಣ್ಣಿನಲ್ಲಿ ಜನಿಸಿದ ಕಾರ್ಯಪ್ಪ ಅವರು ಕೊಡಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತೀಯ ಸೇನೆಯಲ್ಲಿ ಶಿಸ್ತನ್ನು ಮೂಡಿಸಿದ ಕಾರ್ಯಪ್ಪನವರು ಶಿಸ್ತಿನೊಂದಿಗೆ ಸಮಯಪಾಲನೆಗೆ ಅತ್ಯಂತ ಮಹತ್ವವನ್ನು ಕೊಡುತ್ತಿದ್ದರು ಎಂದು ಹೇಳಿದರು.
ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ಮಾತನಾಡಿ ಇಂದಿನ ಯುವ ಜನತೆ ಕಾರ್ಯಪ್ಪ ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟçರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು. ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಕಾರ್ಯಪ್ಪ ಅವರು ಅಪ್ರತಿಮ ದೇಶ ಪ್ರೇಮಿ, ಅವರು ಬದುಕಿದ ರೀತಿ ಇಂದಿನ ಯುವ ಜನತೆಗೆ ದಾರಿ ದೀಪ ಎಂದರು.
ಈ ಸಂದರ್ಭ ಉಪ ಪ್ರಾಂಶುಪಾಲೆ ಡಾ.ಎ ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಎಂ.ಆರ್. ಆಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾ, ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆಡಳಿತಾತ್ಮಕ ಸಿಬ್ಬಂದಿ ಹಾಜರಿದ್ದರು.