ಅಪಾಯದಂಚಿನಲ್ಲಿರುವ ಕನ್ನಡ ರಕ್ಷಣೆಗೆ ಕನ್ನಡಿಗರು ಜಾಗೃತಗೊಂಡು ಕಟಿಬದ್ಧರಾಗಬೇಕೆಂದು ಹಿರಿಯ ಸಾಹಿತಿ ಗಂಗಾಧರ್ ಗೌಡ ಕರೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸರಕಾರದಿಂದ ಮಾತ್ರ ಕನ್ನಡೀಕರಣ ಆಗುವುದಿಲ್ಲ. ಕನ್ನಡಿಗರು ಜಾಗೃತಗೊಂಡರೆ ಮಾತ್ರ ಕನ್ನಡ ಉಳಿಯುತ್ತದೆ. ನಮ್ಮ ಸಂಸ್ಕೃತಿಯನ್ನು ಪಸರಿಸುವ ಕೆಲಸವಾಗಬೇಕು. ನಮ್ಮ ಭಾಷೆ, ಸಾಹಿತ್ಯ, ನಾಡು, ನುಡಿಯ ಕುರಿತು ಅಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಸಮ್ಮೇಳನದ ಆಚರಣೆಯಿಂದ ಗ್ರಾಮದಲ್ಲಿ ಹಬ್ಬದ ಕಳೆ ಸೃಷ್ಟಿಯಾಗಿದೆ. ಜನರ ಒಗ್ಗೂಡುವಿಕೆಗೂ ಸಮ್ಮೇಳನ ಕಾರಣವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತವನ್ನು ಪೂಜಿಸುವ ಜೊತೆಗೆ ಕರ್ನಾಟಕವನ್ನು ಗೌರವಿಸುವ ಕೆಲಸವಾಗಬೇಕು. ಕನ್ನಡತನ ಉಳಿಯಬೇಕು. ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಕನ್ನಡ ಕಲಿಸುವಂತೆ ಹೇಳಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಅನೇಕರು ಶ್ರಮಿಸಿದ ಪರಿಣಾಮ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದರು.

ಈ ಸಂದರ್ಭ ಸಮ್ಮೇಳನ ಸರ್ವಾಧ್ಯಕ್ಷ ಡಾ. ವಿಜಯ್ ಪೂಣಚ್ಚ ತಂಬAಡ, ಜೇನು ಕೃಷಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ, ಕ.ಸಾ.ಪ. ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಬೆಟ್ಟಗೇರಿ ಉದಯ ಶಾಲೆಯ ಅಧ್ಯಕ್ಷ ತಳೂರು ಕಿಶೋರ್ ಹಾಜರಿದ್ದರು.