ದೆಹಲಿ ವಿಶ್ವವಿದ್ಯಾಲಯದ ೨೪ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ನವದೆಹಲಿ, ಜ. ೨೭: ೨೦೦೨ ರ ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬAಧಿಸಿದ ಬಿಬಿಸಿ ತಯಾರಿಸಿರುವ ವಿವಾದಿತ ಸಾಕ್ಷö್ಯಚಿತ್ರವನ್ನು ಪ್ರದರ್ಶಿಸಲು ಯೋಜನೆ ರೂಪಿಸಿದ ಆರೋಪದಡಿ ದೆಹಲಿ ಪೊಲೀಸರು ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ೨೪ ವಿದ್ಯಾರ್ಥಿಗಳನ್ನು ತಾ. ೨೭ ರಂದು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಜೆಎನ್‌ಯು ಹಾಗೂ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿಗಳಲ್ಲಿ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನದ ವಿಷಯವಾಗಿ ಗಲಾಟೆ ಉಂಟಾಗಿತ್ತು. ಈ ಬೆನ್ನಲ್ಲೇ ದೆಹಲಿ ವಿವಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಬೆಳವಣಿಗೆ ನಡೆದಿದೆ. ಉತ್ತರ ವಿಭಾಗದ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಮಾತನಾಡಿ, ಸಂಜೆ ೪ ಗಂಟೆ ವೇಳೆಗೆ ೨೦ ಮಂದಿ ಕಲಾ ವಿಭಾಗದಿಂದ ಹೊರಬಂದು ನಿರ್ಬಂಧಿಸಿರುವ ಬಿಬಿಸಿ ಸಾಕ್ಷö್ಯಚಿತ್ರವನ್ನು ಪ್ರದರ್ಶಿಸಲು ಯತ್ನಿಸಿದರು. ಈ ನಡೆ ಶಾಂತಿ ಹಾಗೂ ಪ್ರಶಾಂತ ವಾತಾವರಣ ಕದಡುವ ಸಾಧ್ಯತೆ ಇರುವುದರಿಂದ ಅವರನ್ನು ಅಲ್ಲಿಂದ ತೆರಳುವಂತೆ ಹೇಳಲಾಯಿತು. ಆದರೆ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಶಾಂತಿಯುತವಾಗಿ ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ. ಒಟ್ಟು ೨೪ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಗೋ ಫಸ್ಟ್ಗೆ ರೂ. ೧೦ ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ, ಜ. ೨೭: ಕಳೆದ ತಾ. ೯ ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ೫೫ ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ಹಾರಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ೧೦ ಲಕ್ಷ ರೂಪಾಯಿ ದಂಡ ವಿಧಿಸಿದೆ. ಘಟನೆಯ ನಂತರ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಶೋಕಾಸ್ ನೋಟೀಸ್‌ಗೆ ಗೋ ಫಸ್ಟ್ ನೀಡಿದ ಉತ್ತರದಲ್ಲಿ, ವಿಮಾನದಲ್ಲಿ ಪ್ರಯಾಣಿಕರನ್ನು ಬೋರ್ಡಿಂಗ್ ಮಾಡುವ ಬಗ್ಗೆ ಟರ್ಮಿನಲ್ ಸಂಯೋಜಕರು, ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ಸಂವಹನ ಕೊರತೆಯಿಂದ ಈ ಘಟನೆ ನಡೆದಿದೆ ಎಂದು ತಿಳಿಸಿದೆ. ಗ್ರೌಂಡ್ ಹ್ಯಾಂಡ್ಲಿAಗ್, ಲೋಡ್ ಮತ್ತು ಟ್ರಿಮ್ ಶೀಟ್ ತಯಾರಿಕೆ, ವಿಮಾನ ರವಾನೆ ಮತ್ತು ಪ್ರಯಾಣಿಕರ ನಿರ್ವಹಣೆಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುವಲ್ಲಿ ವಿಮಾನಯಾನ ಸಂಸ್ಥೆ ವಿಫಲವಾಗಿದೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಈ ಲೋಪಗಳಿಗಾಗಿ, ಡಿಜಿಸಿಎ, ಗೋ ಫಸ್ಟ್ ಏರ್‌ಲೈನ್‌ಗೆ ೧೦ ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪೊಲೀಸ್ ಭದ್ರತೆ ಸಂಪೂರ್ಣ ವಿಫಲ : ರಾಹುಲ್ ಯಾತ್ರೆ ರದ್ದು

ಖಾನಬಾಲ್, ಜ. ೨೭: ದುರದೃಷ್ಟವಶಾತ್ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾದ ಕಾರಣ ಈ ದಿನದ ಭಾರತ್ ಜೋಡೋ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ಪಾದಯಾತ್ರೆ ಸ್ಥಗಿತಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷರ ರಾಹುಲ್ ಗಾಂಧಿ, ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸ್ ಸಿಬ್ಬಂದಿ ಎಲ್ಲಿಯೂ ಕಾಣಲಿಲ್ಲ ಎಂದು ಆರೋಪಿಸಿದ್ದಾರೆ. ಭದ್ರತೆ ಒದಗಿಸುವುದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಜವಾಬ್ದಾರಿಯಾಗಿದೆ. ಯಾತ್ರೆಯ ಉಳಿದ ದಿನಗಳಲ್ಲಿ ಭದ್ರತೆ ಖಾತರಿಪಡಿಸಲಾಗುವುದು ಎಂದು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಭದ್ರತಾ ಸಿಬ್ಬಂದಿಯ ಸಲಹೆ ವಿರುದ್ಧ ಹೋಗಲು ಸಾಧ್ಯವಿಲ್ಲದ ಕಾರಣ ನಾನು ಇಂದು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ಯಾತ್ರೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಹುಲ್ ಗಾಂಧಿಯವರ ಭದ್ರತಾ ತಂಡ, ಜಮ್ಮು ಮತ್ತು ಕಾಶ್ಮೀರ ಆಡಳಿತದೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅವರ ಪಕ್ಷದ ಸಹೋದ್ಯೋಗಿ ಜೈರಾಮ್ ರಮೇಶ್ ಹೇಳಿದ್ದಾರೆ.

ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ

ಬೆಂಗಳೂರು, ಜ. ೨೭: ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಭರವಸೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿAದ ಆಯೋಜನೆ ಮಾಡಿರುವ "ವಿಜ್ಞಾನ ಮೇಳ ೨೦೨೩"ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇವಲ ಕಟ್ಟಡ ಕಟ್ಟಿದರೆ ಸಾಲದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು ಆಗಬೇಕಿದೆ? ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಪಟ್ಟಿ ನೀಡಿ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ನಾನು ಅನುದಾನ ಕೊಡುತ್ತೇನೆಂದು ಹೇಳಿದರು. ಶಾಲೆಗಳಿಗೆ ಕೊಡುವ ಅನುದಾನ ಜಾಸ್ತಿಯಾಗುತ್ತಿದೆ. ಆದರೆ, ಅಭಿವೃದ್ಧಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಮಕ್ಕಳಿಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಮೊದಲು ಮಕ್ಕಳ ಭವಿಷ್ಯ, ಆ ನಂತರ ಕಾಂಟ್ಯಾಕ್ಟ್ರರ್ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವಸತಿ ಶಾಲೆಗಳಲ್ಲಿ ಕೇಲವ ಕಟ್ಟಡ ಹೆಚ್ಚಾಗುತ್ತಿದೆ. ಕೇವಲ ಕಾಂಟ್ರ‍್ಯಾಕ್ಟರ್ ಆಧಾರಿತ ಕೆಲಸ ಮಾಡಿದರೆ ಪ್ರಯೋಜನ ಇಲ್ಲ. ಬಿಲ್ಡಿಂಗ್ ವೆಚ್ಚ ರೂ. ೫-೧೦ ಕೋಟಿ ಆದರೆ ಇದೀಗ ರೂ. ೨೦-೩೦ ಕೋಟಿ ಆಗಿದೆ. ಕೇವಲ ಕಟ್ಟಡ ಕಟ್ಟುವುದು ಬಿಟ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ದೇಶದ ೫೩ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ೨,೯೬೭ ಹುಲಿಗಳು

ನವದೆಹಲಿ, ಜ. ೨೭: ೨೦೧೮ರ ವರದಿಯ ಪ್ರಕಾರ ದೇಶದ ೫೩ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು ೨,೯೬೭ ಹುಲಿಗಳಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ. ದೇಶದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಅಳಿವಿನಂಚಿನಲ್ಲಿರುವ ಹುಲಿಗಳನ್ನು ಉಳಿಸುವಂತೆ ಕೋರಿ ೨೦೧೭ರಲ್ಲಿ ವಕೀಲ ಅನುಪಮ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರ ಪೀಠಕ್ಕೆ ಈ ಮಾಹಿತಿ ನೀಡಿದರು. ದೇಶದಲ್ಲಿ ಹುಲಿಗಳ ಸಂರಕ್ಷಣೆ ಮತ್ತು ಅವುಗಳ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ಭಾಟಿ ಅವರು ತಿಳಿಸಿದರು. ೨೦೧೮ ರ ಹುಲಿ ಗಣತಿಯ ಪ್ರಕಾರ, ಭಾರತದ ೫೩ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ೨,೯೬೭ ಹುಲಿಗಳಿದ್ದು, ಈ ಸಂಖ್ಯೆಯು ಜಾಗತಿಕ ಸಂಖ್ಯೆಯ ಶೇ. ೭೦ ರಷ್ಟಿದೆ ಮತ್ತು ಅಂಕಿಅAಶಗಳು ಹುಲಿಗಳ ಬೆಳವಣಿಗೆಯನ್ನು ಸೂಚಿಸುತ್ತವೆ ಎಂದು ಎಎಸ್‌ಜಿ ಐಶ್ವರ್ಯಾ ಭಾಟಿ ಹೇಳಿದರು. ಅರ್ಜಿದಾರ ಅನುಪಮ್ ತ್ರಿಪಾಠಿ ಅವರು ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮಾರ್ಚ್ ೩ಕ್ಕೆ ಮುಂದೂಡಿತು.

ಇಸ್ರೇಲಿ ಸೇನೆಯಿಂದ ರಾಕೆಟ್ ದಾಳಿ: ೯ ಪ್ಯಾಲೆಸ್ತೀನಿಯರ ಸಾವು

ಇಸ್ರೇಲ್, ಜ. ೨೭: ಇಸ್ರೇಲಿ ಪಡೆಗಳು ವೆಸ್ಟ್ ಬ್ಯಾಂಕ್ ಸಂಘರ್ಷ ವಲಯಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದು ೬೦ರ ವರ್ಷದ ಮಹಿಳೆ ಸೇರಿದಂತೆ ಕನಿಷ್ಟ ಒಂಭತ್ತು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಕೆಟ್ ದಾಳಿಯಲ್ಲಿ ಕನಿಷ್ಟ ಏಳು ಉಗ್ರಗಾಮಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು ಗಾಜಾ ಉಗ್ರಗಾಮಿಗಳು ರಾಕೆಟ್‌ಗಳನ್ನು ಉಡಾಯಿಸಿದ್ದರು. ಇದರ ಬೆನ್ನಲ್ಲೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಗಾಜಾ ಪಟ್ಟಿಯನ್ನು ನಿಯಂತ್ರಿಸುವ ಇಸ್ಲಾಮಿ ಉಗ್ರಗಾಮಿ ಸಂಘಟನೆ ಹಮಾಸ್ ಪ್ರತೀಕಾರದ ಬೆದರಿಕೆ ಹಾಕಿದೆ. ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ಹಗಲಿರುಳು ಕಾರ್ಯಾಚರಣೆ ನಡೆಸಿದಾಗ ಈ ಘರ್ಷಣೆ ನಡೆದಿದೆ. ಇಸ್ರೇಲಿಗಳ ವಿರುದ್ಧ ಸನ್ನಿಹಿತವಾದ ದಾಳಿಯನ್ನು ತಡೆಯಲು ಈ ಕಾರ್ಯಾಚರಣೆ ನಡೆಸಲಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.