ಮಡಿಕೇರಿ, ಜ. ೨೭: ಪ್ರತಿವರ್ಷ ಪ್ರವಾಸಿಗರನ್ನು ಸೊಜಿಗಲ್ಲಿನಂತೆ ಸೆಳೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಕೋವಿಡ್ ಪರಿಸ್ಥಿತಿಯಿಂದ ಕಳೆದ ೨ ವರ್ಷ ಸ್ಥಗಿತಗೊಂಡಿತ್ತು. ಇದೀಗ ಮತ್ತೇ ರಾಜಾಸೀಟ್‌ನಲ್ಲಿ ಹೂವಿನ ಲೋಕ ಅರಳಲಿದೆ. ಫೆಬ್ರವರಿ ೩ ರಿಂದ ೬ ರ ತನಕ ‘ಫ್ಲ್ಲವರ್ ಶೋ’ ಆಕರ್ಷಣೆಯೊಂದಿಗೆ ವೈನ್ ಮೇಳವೂ ನಡೆಯಲಿದೆ.
ಈ ಬಗ್ಗೆ ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಮಡಿಕೇರಿಯ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ೧೦ ರಿಂದ ೧೨ ಸಾವಿರ ಸಂಖ್ಯೆಯ ಪೇಟೊನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಫ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಸೇರಿದಂತೆ ೨೦ ಜಾತಿಯ ಹೂಗಳನ್ನು ರಾಜಾಸೀಟ್ ಉದ್ಯಾನದಲ್ಲಿ ಪಾತಿ ಹಾಗೂ ಕುಂಡಗಳಲ್ಲಿ ನೆಡಲಾಗಿದೆ ಎಂದು ಮಾಹಿತಿ ನೀಡಿದರು.
ಕಲಾಕೃತಿಗಳ ಆಕರ್ಷಣೆ
ಪ್ರತಿವರ್ಷದಂತೆ ಈ ವರ್ಷವೂ ಹೂವಿನಿಂದ ಮಾಡಿದ ಕಲಾಕೃತಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿವೆ. ರಾಜರ ಕಾಲದ ನಾಲ್ಕುನಾಡ್ ಅರಮನೆಯ ಕಲಾಕೃತಿಯನ್ನು ೧೮ ಅಡಿ ಎತ್ತರ, ೧೩ ಅಡಿ ಉದ್ದ, ೩೫ ಅಡಿ ಅಗಲದಲ್ಲಿ ವಿವಿಧ ಬಗೆಯ ಹೂಗಳಿಂದ ನಿರ್ಮಿಸಲಾಗುವುದು. ಇದರೊಂದಿಗೆ ಮತದಾನದ ಅರಿವು ಮೂಡಿಸಲು ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಮಾದರಿಯನ್ನು ಬಣ್ಣಬಣ್ಣದ ಹೂವಿನಿಂದ ರಚಿಸಲಾಗುವುದು.
ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯನ್ನು ಪ್ರತಿಬಿಂಬಿಸಲು ಕಾಫಿ ಕಪ್ ಹಾಗೂ ಸಾಸರ್ ಮಾದರಿ, ಮಕ್ಕಳಿಗೆ
(ಮೊದಲ ಪುಟದಿಂದ) ಮನರಂಜನೆ ನೀಡುವ ಉದ್ದೇಶದಿಂದ ಸೈಡರ್ ಮೆನ್, ಮಾಶ ಆ್ಯಂಡ್ ಬೇರ್ ಸೇರಿದಂತೆ ಇನ್ನಿತರ ಕಾರ್ಟೂನ್ ಪಾತ್ರಗಳನ್ನು ಹೂವಿನಿಂದ ಸೃಷ್ಟಿಸಲಾಗುವುದು. ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ ಹಾಗೂ ಹಣ್ಣುಗಳನ್ನು ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಇಕೆಬಾನೆ ಜೋಡಣೆ ಹಾಗೂ ಆ್ಯಂಥೋರಿಯA ಹೂವಿನ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧಿ ಮೈದಾನದಲ್ಲಿ ೬೦ ಮಳಿಗೆಗಳನ್ನು ನಿರ್ಮಿಸಲಾಗುವುದು. ೨೦ ಮಳಿಗೆಗಳನ್ನು ತೋಟಗಾರಿಕೆ, ಕೃಷಿ, ಕೈಗಾರಿಕೆ, ವಾಣಿಜ್ಯ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. ೪೦ ಮಳಿಗೆ ಖಾಸಗಿ ಅವರಿಗೆ ನೀಡಲಾಗುವುದು ಎಂದರು.
ವಿವಿಧ ಸ್ಪರ್ಧೆ
ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಹೂ ಜೋಡಣೆ, ರಂಗೋಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಫೆ. ೩ ರಂದು ಬೆಳಿಗ್ಗೆ ೧೦ ಗಂಟೆಗೆ ರಾಜಾಸೀಟ್ ಉದ್ಯಾನಕ್ಕೆ ಬಂದು ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ವೈನ್ ಉತ್ಸವ
ಇದೇ ಸಂದರ್ಭ ಕರ್ನಾಟಕ ದ್ರಾಕ್ಷಿ ರಸ ಮಂಡಳಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗಾಂಧಿ ಮೈದಾನದಲ್ಲಿ ವೈನ್ ಉತ್ಸವ ನಡೆಯಲಿದೆ. ಹೋಂ ಮೇಡ್ ವೈನ್, ವೈನ್ ಬೋರ್ಡ್ ವತಿಯಿಂದ ಬ್ರಾಂಡ್ ವೈನ್‌ಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ‘ಟೆಸ್ಟಿಂಗ್ ಹಾಗೂ ಟೇಸ್ಟಿಂಗ್’ ವ್ಯವಸ್ಥೆ ಇರಲಿದೆ. ಆಸಕ್ತ ವೈನ್ ತಯಾರಕರು ಭಾಗವಹಿಸಲು ಅವಕಾಶವಿದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಮಾತನಾಡಿ, ೨೦೨೦ರಲ್ಲಿ ಫ್ಲವರ್ ಶೋ ನಡೆದಿತ್ತು. ಅದಾದ ಬಳಿಕ ಕೋವಿಡ್‌ನಿಂದ ಕಾರ್ಯಕ್ರಮ ನಡೆದಿರಲಿಲ್ಲ. ಆ ಸಮಯದಲ್ಲಿ ದಿನಕ್ಕೆ ೧೫ ಸಾವಿರ ಜನ ಬಂದು ಫ್ಲವರ್ ಶೋ ಕಣ್ತುಂಬಿಕೊAಡಿದ್ದರು. ಈ ವರ್ಷ ಕೂಡ ಅಷ್ಟೇ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.
ಫೆ.೩ ರಂದು ಸಂಜೆ ೪ ಗಂಟೆಗೆ ಫಲಪುಷ್ಪ ಪ್ರದರ್ಶನವನ್ನು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಮಳಿಗೆಯನ್ನು ತೋಟಗಾರಿಕೆ ಸಚಿವ ಮುನಿರತ್ನ ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಸಂಸದ ಪ್ರತಾಪ್ ಸಿಂಹ, ಜೀವ ವೈವಿಧ್ಯ ಮಂಡಳಿ ರಾಜ್ಯಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೊಡಗು ಜಿ.ಪಂ. ಆಡಳಿತಾಧಿಕಾರಿ ಅನ್ಬುಕುಮಾರ್, ತೋಟಗಾರಿಕೆ ಇಲಾಖೆ ರಾಜ್ಯ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.