ಮಡಿಕೇರಿ, ಜ. ೨೬: ಭಾರತದ ರಕ್ಷಣಾ ಪಡೆಯ ಇತಿಹಾಸದಲ್ಲಿ ಕೊಡಗಿನ ಧಿಮಂತ ವ್ಯಕ್ತಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರು ಅಜರಾಮರ. ಸ್ವತಂತ್ರ ಭಾರತದ ರಕ್ಷಣಾಪಡೆಯ ಪ್ರಪ್ರಥಮ ಮಹಾದಂಡನಾಯಕರಾಗಿ ಕೆಲಸ ನಿರ್ವಹಿಸಿದ ಕೀರ್ತಿಯೊಂದಿಗೆ ಇವರು ಭಾರತೀಯ ಸೇನೆಗೆ ಮಾದರಿ ಯಾಗಿದ್ದಾರೆ. ಕಾರ್ಯಪ್ಪ ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೂ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಸೇವೆಗಾಗಿ ದೊರೆತ ಹಲವು ಜಾಗಗಳನ್ನು ಇವರು ವಿವಿಧ ಕಾರ್ಯಕ್ಕೆ ಉದಾರವಾಗಿ ನೀಡಿದ್ದಾರೆ.
ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಬೆಂಗಳೂರಿನ ವಸಂತನಗರ ದಲ್ಲಿ ನೀಡಿರುವ ಸುಮಾರು ಒಂದು ಎಕರೆ ಜಾಗವನ್ನು ಇವರು ಆ ಸಂದರ್ಭದಲ್ಲಿ ಕೂರ್ಗ್ ಅಸೋಸಿಯೇಷನ್ಗೆ ಉದಾರವಾಗಿ ನೀಡಿದ್ದು, ಇದು ಇಂದಿನ ಪ್ರತಿಷ್ಠಿತ ಬೆಂಗಳೂರು ಕೊಡವ ಸಮಾಜವಾಗಿ ತಲೆಎತ್ತಿದೆ. ಮಡಿಕೇರಿ ಯಲ್ಲೂ ಬಾಲಭವನ ಜಾಗ, ಕೊಡಗು ವಿದ್ಯಾಲಯ ರೋಷನಾರ ಕೆರೆ ಇವುಗಳು ಕಾರ್ಯಪ್ಪ ಅವರ ಕೊಡಗೆಗಳಾಗಿವೆ.
ಸುಮಾರು ೩೫ ವರ್ಷಗಳಿಂದ ಇವರ ಜನ್ಮದಿನವಾದ ಜನವರಿ ೨೮ ರಂದು ಕಾರ್ಯಪ್ಪ ಅವರನ್ನು ಸ್ಮರಿಸಿಕೊಂಡು ಬರುತ್ತಿದ್ದ ಬೆಂಗಳೂರು ಕೊಡವ ಸಮಾಜ ನಂತರ ೨೦೦೧ನೇ ಇಸವಿಯಿಂದ ಕಾರ್ಯಪ್ಪ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿ ಕೊಂಡು ಬರುತ್ತಿದೆ.
ಜನವರಿ ೨೮ರ ಈ ದಿನವನ್ನು ಬೆಂಗಳೂರು ಕೊಡವ ಸಮಾಜ ಕೊಡವ ಸಾಂಸ್ಕೃತಿಕ ದಿನವನ್ನಾಗಿ ಆಚರಿಸುವ ನಿರ್ಧಾರವನ್ನು ೨೦೦೧ರಲ್ಲಿ ಆಗಿನ ಅಧ್ಯಕ್ಷರಾಗಿದ್ದ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರ ಅವಧಿಯಲ್ಲಿ ಕೈಗೊಂಡಿದೆ. ಇದಾದ ಬಳಿಕ ಸತತವಾಗಿ ಕಳೆದ ೨೨ ವರ್ಷದಿಂದ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಬಾರಿ ೨೩ನೇಯ ವರ್ಷದ ಕಾರ್ಯಕ್ರಮ ಜರುಗಲಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಕೊಡವ ಸಮಾಜದೊಂದಿಗೆ ಸಂಪರ್ಕ ಹೊಂದಿರುವ ೩೨ ಕೊಡವ ಸಂಘಗಳ ನಡುವೆ ಈ ಪ್ರಯುಕ್ತ ಕೊಡವ ಸಾಂಸ್ಕೃತಿಕ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಬೊಳಕಾಟ್, ಕೋಲಾಟ್, ಉಮ್ಮತ್ತಾಟ್, ಕತ್ತಿಯಾಟ್, ಗುಂಪು ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಈ ಸಂಘಗಳ ನಡುವೆ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುತ್ತವೆ. ಜ. ೨೮ ರಂದೇ ಎಲ್ಲಾ ಸ್ಪರ್ಧೆ ನಡೆಸಲು ಸಾಧ್ಯವಾಗದ ಕಾರಣ ಸಮಾಜದ ಇತ್ತೀಚಿನ ನಿರ್ಧಾರದಂತೆ ನವೆಂಬರ್ ಮೊದಲ ವಾರದಲ್ಲಿಯೇ ಈ ಸ್ಪರ್ಧೆಗಳನ್ನು ಆಯೋಜಿಸ ಲಾಗುತ್ತದೆ. ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸಂಘಗಳ ಮೂಲಕ ಕಾರ್ಯಪ್ಪ ಜನ್ಮದಿನದಂದು ಇದರ ಪ್ರದರ್ಶನದೊಂದಿಗೆ ಅದ್ಧೂರಿ ಕಾರ್ಯಕ್ರಮ ಸಮಾಜದಲ್ಲಿ ಜರುಗುತ್ತದೆ. ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಸಮಾಜದ ಸನಿಹದಲ್ಲಿ ಕಂಟೋನ್ಮೆAಟ್ ಬಳಿ ಬಿ.ಬಿ.ಎಂ.ಪಿ. ಸಹಕಾರದೊಂದಿಗೆ ಪ್ರತಿಷ್ಠಾಪಿಸ ಲಾಗಿರುವ ಕಾರ್ಯಪ್ಪ ಪ್ರತಿಮೆಗೆ ಗೌರವಾರ್ಪಣೆ ಬಳಿಕ ಸಮಾಜದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ದಿನಾಚರಣೆ ಈ ದಿನದ ವಿಶೇಷವಾಗಿರುತ್ತದೆ. ಸಮಾರಂಭಕ್ಕೆ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಪ್ರಮುಖರನ್ನು ಆಹ್ವಾನಿಸಲಾಗುತ್ತದೆ. ಪ್ರಸಕ್ತ ವರ್ಷದ ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರುಗಳೊಂದಿಗೆ ಕೊಡಗಿನಲ್ಲಿರುವ ಫಿ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ನಿವೃತ್ತ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ಹಾಗೂ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರುಗಳು ಪಾಲ್ಗೊಳ್ಳುತ್ತಿದ್ದಾರೆ.
ಈ ಬಾರಿಯ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈಗಾಗಲೇ ನವೆಂಬರ್ ಮೊದಲ ವಾರದಲ್ಲಿ ೩೨ ಕೊಡವ ಸಂಘಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಜ. ೨೮ ರಂದು ವಿಜೇತರುಗಳಿಂದ ಪ್ರದರ್ಶನ ದೊಂದಿಗೆ ಸಾಂಸ್ಕೃತಿಕ ದಿನ ಜರುಗಲಿದೆ.
-ಕಾಯಪಂಡ ಶಶಿ ಸೋಮಯ್ಯ