ಗೋಣಿಕೊಪ್ಪಲು, ಜ. ೨೬: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮೃದ್ಧಿ ಪುರುಷ ಸ್ವಸಹಾಯ ಸಂಘದ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು.

ಜಿಲ್ಲೆಯ ವಿವಿಧ ಭಾಗದಿಂದ ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು. ಅಂತಿಮವಾಗಿ ಎಡಪಾಲ ಫೋರ್ ಸ್ಟಾರ್ ತಂಡವು ಚಾಂಪಿಯನ್ ಪಟ್ಟ ತನ್ನದಾಗಿಸಿ ಕೊಂಡಿತು. ಕಿರುಗೂರು ಫ್ರೆಂಡ್ಸ್ ತಂಡವು ದ್ವಿತೀಯ ಸ್ಥಾನ ಪಡೆದರೆ, ಗುಂಡಿಗೆರೆಯ ಸ್ಟಾರ್ ಬಾಯ್ಸ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಹೈಕೋರ್ಟ್ ಹಿರಿಯ ವಕೀಲ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಎಲ್ಲಾ ಜನಾಂಗವನ್ನು ಒಂದೇ ವೇದಿಕೆಯಡಿ ತರುವ ಶಕ್ತಿ ಕ್ರೀಡೆಗೆ ಇದೆ. ಇದರಿಂದಾಗಿ ಪ್ರತಿಯೊಬ್ಬರು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಕ್ರೀಡೆಗೆ ಸಹಕಾರ ನೀಡುವುದರಿಂದ ಯುವಕರಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಕ್ರೀಡೆಯಲ್ಲಿ ಅವಕಾಶ ಸಿಗುವುದು ಸಾಮಾನ್ಯ ವಿಚಾರವಲ್ಲ. ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಯುವಕರು ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.

ಸಮೃದ್ಧಿ ಪುರುಷ ಸ್ವಸಹಾಯ ಸಂಘದ ಅಧ್ಯಕ್ಷ ಸಿ.ಕೆ. ಅಬ್ದುಲ್ಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟು ಎಂ.ಜಿ. ಮ್ಯಾಥ್ಯೂಸ್, ಪ್ರಮುಖರಾದ ಸೂಫಿ ಹಾಜಿ, ಪಿ.ಎ. ಮುಸ್ತಾಫ, ಎಸ್.ಐ. ಹೆಚ್.ಸಿ. ಸುಬ್ರಮಣಿ, ಮುಖ್ಯೋಪಾ ಧ್ಯಾಯರಾದ ಬಿನ್ಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಗ್ರಾ.ಪಂ. ಸದಸ್ಯರಾದ ಲಲಿತ, ಪ್ರಾಣ್ ಬೋಪಣ್ಣ ಪ್ರಮುಖರಾದ ಮತ್ರಂಡ ಪ್ರವೀಣ್ ಕುಶಾಲಪ್ಪ, ಪಿ.ಎ. ಮಹಮ್ಮದ್, ವಕೀಲ ಮತ್ರಂಡ ರಕ್ಷಿತ್ ಪೂವಣ್ಣ, ಹರೀಶ್ ಬಿ.ವಿ., ಸಿ.ಕೆ. ಇಬ್ರಾಹಿಂ, ಮತ್ರಂಡ ಬ್ರಿಗಿ ಪೊನ್ನಣ್ಣ, ಟಿ.ಜಿ. ಪ್ರಣವ್, ಅನಿಶ್ ಅಹಮ್ಮದ್, ಹಸೈನರ್, ಸಾಜಿ ಅಚ್ಚುತ್ತನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.