(ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜ. ೨೭: ಪ್ರಪಂಚದಲ್ಲಿ ಎಲ್ಲೂ ಕಾಣ ಸಿಗದ ಅಪರೂಪದಲ್ಲಿ ಅಪರೂಪವಾದ ಸೇನಾ ದಿಗ್ಗಜರ ಜೋಡಿ ಪ್ರತಿಮೆಗಳು ಒಂದೇ ಸ್ಥಳದಲ್ಲಿ ಒಂದೇ ಎತ್ತರದಲ್ಲಿರುವ ಮೂಲಕ ಪ್ರಪಂಚದಲ್ಲೆ ಸೇನಾ ಮಹಾದಂಡನಾಯಕರ ಪ್ರತಿಮೆಗಳು ಗಮನ ಸೆಳೆಯುತ್ತಿವೆ.
ಭಾರತ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಕೊಡಗಿನ ಸುಪುತ್ರರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪ್ರತಿಮೆಗಳು ದೇಶ, ವಿದೇಶ ಹಾಗೂ ಸೇನಾ ಕಚೇರಿಗಳಲ್ಲಿ ವಿಜೃಂಭಿಸುತ್ತಿವೆ. ಅಲ್ಲದೆ ಹಲವಷ್ಟು ಕಡೆಗಳಲ್ಲಿ ಇವರ ಹೆಸರು ಇರುವ ರಸ್ತೆಗಳು, ಉದ್ಯಾನವನಗಳು ನಿರ್ಮಾಣವಾಗಿದೆ. ಆದರೆ ಜೋಡಿ ಪ್ರತಿಮೆಗಳಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪುತ್ಥಳಿಗಳು ದ.ಕೊಡಗಿನ ವಿದ್ಯಾನಗರವೆಂದೇ ಖ್ಯಾತಿ ಪಡೆದಿರುವ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಕಾವೇರಿ ಕಾಲೇಜಿನ ಸುಂದರ ಪರಿಸರದ ನಡುವೆ ನಿಂತಿವೆ.
ಕಾರ್ಯಪ್ಪ ಅವರು ನಮ್ಮ ಭಾರತ ದೇಶದ ಸೇನೆಯ ಪ್ರಥಮ ಮಹಾ ದಂಡನಾಯಕ, ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರಾಗಿದ್ದಾರೆ. ಕೊಡಂದೇರ ಮಾದಪ್ಪರವರ ಪುತ್ರರಾಗಿ ೧೮೯೯ ಜನವರಿ ೨೮ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಜನಿಸಿದ ಕಾರ್ಯಪ್ಪ ಅವರು ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು.
ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿದ್ದುದರಿಂದ ೧೯೧೭ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿ ಬಂದಿತ್ತು. ೧೯೧೮ರಲ್ಲಿ ಮೊದಲನೆಯ ವಿಶ್ವ ಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿತದ ಕಿಂಗ್ಸ್ ಕಮಿಷನ್ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು,
(ಮೊದಲ ಪುಟದಿಂದ) ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂಧೋರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು. ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿದ್ದ ೩೭ (ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು ೨ನೇ ರಾಜಪೂತ್ ಲಘು ಪದಾತಿದಳ (ವಿಕ್ಟೊರಿಯಾರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ೧೯೪೬ರಲ್ಲಿ ಫ್ರಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೇಡಿಯರರಾಗಿ ಬಡ್ತಿ ಪಡೆದ ಇವರು ಕರ್ನಲ್ ಅಯೂಬ್ಖಾನ್ (ಸ್ವಾತಂತ್ರö್ಯ ಬಳಿಕ ಪಾಕಿಸ್ತಾನ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು ೧೯೬೨ರಿಂದ ೧೯೬೯ರವರೆಗೆ ರಾಷ್ಟçಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ೧೯೪೧-೪೨ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ ದೇಶಗಳಲ್ಲಿಯೂ, ೧೯೪೩-೪೪ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ ಕಾರ್ಯನಿರ್ವಹಿಸಿದರು. ೧೯೪೨ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಅದಾದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಸಲುವಾಗಿ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸಿದ ಅವರು ಅದನ್ನು ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಯನ್ನು ನೀಡಲಾಯಿತು.
೧೯೪೭ರಲ್ಲಿ ಯುನೈಟೆಡ್ ಕಿಂಗ್ ಡಮ್ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದ ಅವರು, ಅಲ್ಲಿಯೂ ಆ ತರಬೇತಿಯನ್ನು ಪಡೆದ ಮೊದಲ ಭಾರತೀಯರಾದರು. ಸ್ವಾತಂತ್ರö್ಯ ದೊರೆತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಎರಡು ದೇಶಗಳಿಗೆ ಸಮಾಧಾನವಾಗುವ ರೀತಿಯಲ್ಲಿ ನೆರವೇರಿಸಿದರು.
ಸ್ವಾತಂತ್ರö್ಯ ನಂತರ ಭಾರತದ ಬಳಿಕ ಕಾರ್ಯಪ್ಪನವರು ಮೇಜರ್ ಜನರಲ್ ಪದವಿಗೆ ಏರಿದರಲ್ಲದೆ, ಸೈನ್ಯದ ಉಪ ದಂಡನಾಯಕರಾದರು. ನಂತರ ಲೆಫ್ಟಿನೆಂಟ್ ಜನರಲ್ ಎಂದು ಪದೊನ್ನತಿಗೊಳಿಸಿ ಪೂರ್ವದ ಸೈನ್ಯದ ಕಮಾಂಡರ್ ಆದರು. ೧೯೪೭ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ಗಳನ್ನು ವಾಪಸ್ ಪಡೆಯುವಲ್ಲಿಯೂ ಯಶಸ್ವಿಯಾದರು. ೧೯೮೩ರಲ್ಲಿ ಭಾರತದ ಮಹಾದಂಡನಾಯಕ (ಫೀಲ್ಡ್ಮಾರ್ಷಲ್)ರಾದರು. ಇವರು ನಿವೃತ್ತಿಯ ಬಳಿಕ ಮಡಿಕೇರಿಯ ನಿಸರ್ಗ ಸುಂದರ ಸ್ಥಳವಾದ ರೋಷನಾರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಕೊನೆಯವರೆಗೂ ಶಿಸ್ತಿನಿಂದಲೇ ಬದುಕಿದ ಅವರು ೧೯೯೩ರ ಮೇ ೧೫ರಂದು ನಮ್ಮನ್ನಗಲಿದರು. ಇವತ್ತು ಕಾರ್ಯಪ್ಪರವರು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರ ಧೀರತನ, ಶಿಸ್ತು, ಪರಿಸರ ಸಂರಕ್ಷಣೆ, ದೇಶಕ್ಕೆ ನೀಡಿದ ಸೇವೆ ಸ್ಮರಿಸುತ್ತಲೇ ಇರುತ್ತೇವೆ. ಇಂತಹ ಮಹಾದಂಡನಾಯಕರ ಪುತ್ಥಳಿ ಒಂದೇ ಸ್ಥಳದಲ್ಲಿ ಸ್ಥಾಪಿಸಲು ಕಾರಣಕರ್ತರಾದ ಫೋರಂನ ಪದಾಧಿಕಾರಿಗಳ ಕಾರ್ಯಕ್ಕೆ ಜನಮೆಚ್ಚುಗೆ ಪಡೆದಿದೆ. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ.
ಭಾರತ ದೇಶದ ಸೇನೆಯಲ್ಲಿ ಅಪಾರ ಕೊಡುಗೆ ನೀಡಿದ ದಿಗ್ಗಜರಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರು ಮೊದಲಿಗರು. ಇವರ ದೇಶ ಪ್ರೇಮವು ಯುವಜನತೆಗೆ ಸ್ಪೂರ್ತಿಯಾಗಿದೆ. ಶಿಸ್ತಿಗೆ ಹೆಸರಾಗಿದ್ದ ಇವರು ಕೊಡಗಿನ ಕಣ್ಮಣಿಗಳು. ದೇಶಕಂಡ ಅಪ್ರತಿಮ ದಿಗ್ಗಜರು. ಈ ಇಬ್ಬರ ಸೇನಾನಿಗಳ ಪ್ರತಿಮೆಗಳು ಒಂದೇ ಸ್ಥಳದಲ್ಲಿ ನೆಲೆ ನಿಂತಿರುವುದು ದಾಖಲೆ ಪುಟದಲ್ಲಿ ಅಚ್ಚಾಗಿದೆ. ೨೦೧೭ ನವೆಂಬರ್ ೫ರಂದು ಈ ಮಹಾ ಸೇನಾನಿಗಳ ಕಂಚಿನ ಪ್ರತಿಮೆಯನ್ನು ಆಗಿನ ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ರವರು ಸೇನಾ ಗೌರವದೊಂದಿಗೆ ಅನಾವರಣ ಮಾಡಿದ್ದರು. ಈ ಸಂದರ್ಭ ಜಯಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.
೧೭ ಲಕ್ಷ ವೆಚ್ಚದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಆವರಣದಲ್ಲಿ ಈ ಕಂಚಿನ ಪ್ರತಿಮೆಗಳು ನೆಲೆ ನಿಂತಿದ್ದು ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಇವರುಗಳು ದ್ರುವತಾರೆಗಳು. ಭಾರತೀಯ ಸೇನೆಯಲ್ಲಿ ಈ ಇಬ್ಬರು ಮಹಾದಂಡನಾಯಕರು ದೇಶಕ್ಕೆ ತಮ್ಮದೆ ಆದ ಕೊಡುಗೆ ನೀಡಿದವರು. ಈ ಪ್ರತಿಮೆ ಅನಾವರಣದ ಅಪರೂಪದ ಕ್ಷಣವನ್ನು ಸಾವಿರಾರು ಮಂದಿ ಕಣ್ತುಂಬಿಕೊAಡಿದ್ದರು. ಫೋರಂನ ಅಧ್ಯಕ್ಷರಾದ ಕರ್ನಲ್ ಸುಬ್ಬಯ್ಯ ಹಾಗೂ ಪದಾಧಿಕಾರಿಗಳು ಈ ಪ್ರತಿಮೆಯನ್ನು ತವರು ನೆಲದಲ್ಲಿ ನೆಲೆ ನಿಲ್ಲಿಸಲು ಮೂಲ ಕಾರಣರು.
ಈ ಪ್ರತಿಮೆಗಳು ಯುವಜನತೆಗೆ ಸ್ಪೂರ್ತಿಯಾಗಿವೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೭.೬ ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಮಂಗಳೂರಿನ ಶಿಲ್ಪಿ ವಿಜಯ್ ಅವರು ೭ ವರ್ಷ ಪರಿಶ್ರಮದಿಂದ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಸೇನೆಯ ಇಬ್ಬರು ಮಹಾ ದಂಡನಾಯಕರ ಪ್ರತಿಮೆಗಳು ಅಕ್ಕಪಕ್ಕದಲ್ಲೇ ಪ್ರತಿಸ್ಠಾಪಿಸಲಾಗಿರುವುದು, ಒಂದೇ ಕುಟುಂಬದ ಇಬ್ಬರ ಪ್ರತಿಮೆಗಳನ್ನು ಒಂದೇ ಸ್ಥಳದಲ್ಲಿ ಅನಾವರಣಗೊಳಿಸಿರುವುದು ಇಡೀ ದೇಶದಲ್ಲಿ ಪ್ರಥಮ.