ವೀರಾಜಪೇಟೆ, ಜ. ೨೫: ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಅಶುಚಿತ್ವದ ವಾತಾವರಣದಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ತಾಲೂಕು ತಹಶೀಲ್ದಾರ್ ದಿಢೀರ್ ನಗರ ಸಂಚಾರ ಮಾಡಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವೀರಾಜಪೇಟೆ ಪಟ್ಟಣದಲ್ಲಿ ನಿಯಮ ಬಾಹಿರವಾಗಿ ಎಲ್ಲೆಂದರಲ್ಲಿ ತೆರೆದ ವಾತಾವರಣದಲ್ಲಿ ಆಹಾರ ಪದಾರ್ಥಗಳು ಮಾರಾಟವಾಗುತ್ತಿದೆ. ಅಸ್ಸಾಂನ ಕೆಲವರು ಮಾರಾಟ ಮಾಡುತ್ತಿರುವ ಆಹಾರ ಪದಾರ್ಥಗಳು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರೊಂದಿಗೆ ಕೇರಳ ರಾಜ್ಯದ ಕೆಲವು ವ್ಯಾಪಾರಿಗಳು ಯಾವುದೇ ನಿಯಮಗಳನ್ನು ಅನುಸರಿಸದೆ ತೂಕ, ಗುಣಮಟ್ಟ, ದರ, ಪ್ಯಾಕಿಂಗ್ ದಿನಾಂಕ ಮತ್ತಿತರ ಮಾಹಿತಿಗಳಿಲ್ಲದ ಪ್ಯಾಕೇಟ್‌ಗಳಲ್ಲಿ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು ದಿಢೀರ್ ನಗರ ಸಂಚಾರ ನಡೆಸಿದರು. ರಸ್ತೆ ಬದಿಯ ಎಲ್ಲಾ ಆಹಾರ ಪದಾರ್ಥಗಳ ಮಾರಾಟಗಾರರಿಗೆ ಮಾರಾಟದ ನಿಯಮವನ್ನು ತಿಳಿಸಿಕೊಟ್ಟರು. ನಿಯಮ ಬಾಹಿರವಾಗಿ ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಿಯಮ ಪಾಲನೆಯೊಂದಿಗೆ ಶುಚಿತ್ವವನ್ನು ಕಾಪಾಡಬೇಕು ಮತ್ತು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ಸಂಬAಧಿಸಿದ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.