ಸೋಮವಾರಪೇಟೆ, ಜ. ೨೪: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಕರುವನ್ನು ಕಾಡಾನೆಯೊಂದು ಕೆರೆಗೆ ಎಸೆದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಚನ್ನಾಪುರ ಗ್ರಾಮದ ಸಿ.ಎನ್. ಅಶೋಕ್‌ಕುಮಾರ್ ಅವರಿಗೆ ಸೇರಿದ ಕರುವನ್ನು ಮನೆ ಸಮೀಪವಿರುವ ಗದ್ದೆಯಲ್ಲಿ ಮೇಯಲು ಬಿಡಲಾಗಿತ್ತು. ಈ ಸಂದರ್ಭ ಚಿಕ್ಕಾರ ಭಾಗದಿಂದ ಆಗಮಿಸಿದ ಕಾಡಾನೆಯೊಂದು ಮನೆಯ ಸಮೀಪದಿಂದಲೇ ಗದ್ದೆ ಕಡೆಗೆ ಸಾಗಿದೆ. ಗದ್ದೆಯಲ್ಲಿ ಮೇಯುತ್ತಿದ್ದ ಕರು ಕಾಡಾನೆಯನ್ನು ಕಂಡು ಗಾಬರಿಗೊಂಡ ಹಿನ್ನೆಲೆ ಕಾಡಾನೆಯು ಕರುವನ್ನು ಎತ್ತಿ ಸಮೀಪದ ಕೆರೆಗೆ ಎಸೆದಿದೆ. ತಕ್ಷಣ ಅಶೋಕ್‌ಕುಮಾರ್ ಅವರ ಪತ್ನಿ ಸಿ.ಎ. ಮಮತ ಅವರು, ಜೋರಾಗಿ ಕೂಗು ಹಾಕಿದ ಹಿನ್ನೆಲೆ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ. ಕೆರೆಯೊಳಗೆ ಬಿದ್ದ ಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದೆ.

ಈ ಭಾಗದಲ್ಲಿ ೬ ಆನೆಗಳಿರುವ ಹಿಂಡು ಬೀಡುಬಿಟ್ಟಿದ್ದು, ಸಮೀಪದ ಅರಣ್ಯ ಪ್ರದೇಶದಿಂದ ಆಗಾಗ್ಗೆ ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಇದರಿಂದಾಗಿ ಜನಸಾಮಾನ್ಯರು ನಿರ್ಭಯವಾಗಿ ಓಡಾಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಫಸಲು ಹಾಗೂ ಮಾನವ ಪ್ರಾಣಹಾನಿಯಾಗುವ ಮುನ್ನ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.