*ಗೋಣಿಕೊಪ್ಪ, ಜ. ೨೪: ತಿತಿಮತಿ ಪಂಚಾಯಿತಿ ಜಂಗಲ್ ಹಾಡಿಯಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ.

ಹಾಡಿಯ ನಿವಾಸಿ ದಿನೇಶ್ ಅವರ ನಾಲ್ಕು ವರ್ಷದ ಹಸುವನ್ನು ಮೇಯಲು ಬಿಡಲಾಗಿತ್ತು. ಸಂಜೆ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ ಎಂದು ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ದಿನೇಶ್ ಅವರ ಹಸುವನ್ನು ಹುಲಿ ಭಕ್ಷಿಸಿತ್ತು. ಇದೀಗ ಮತ್ತೊಂದು ಹಸು ಬಲಿಯಾಗಿದೆ.

ಅರಣ್ಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬರುತ್ತಾರೆ ಹೊರತು ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಈ ಕಾರಣದಿಂದ ಸೂಕ್ತವಾದ ಪರಿಹಾರ ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಮೂವತ್ತು ದಿನಗಳಲ್ಲಿ ದಿನೇಶ್ ಅವರ ಎರಡು ಹಸು ಮತ್ತು ಚುಬ್ರು ಅವರ ಒಂದು ಹಸು ಸೇರಿದಂತೆ ಮೂರು ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ.

ಗ್ರಾಮ ಮತ್ತು ಹಾಡಿಗಳಲ್ಲಿ ನಿರಂತರವಾಗಿ ಹುಲಿ ಸಂಚಾರ ನಡೆಸುತ್ತಾ ಜಾನುವಾರುಗಳನ್ನು ಭಕ್ಷಿಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಇಲಾಖೆ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.