ಮಡಿಕೇರಿ, ಜ. ೨೪: ಸರ್ವೆಯ ದಾಖಲೆ ನೀಡಲು ಲಂಚದ ಬೇಡಿಕೆಯೊಡ್ಡಿದ್ದ ಭೂದಾಖಲೆಗಳ ಇಲಾಖೆಯ ಲ್ಯಾಂಡ್ ಸರ್ವೆಯರ್ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಡಿಕೇರಿ ನಗರದಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಹುಣಸೂರಿನ ಮಾದಪ್ಪ ಲಂಚಕ್ಕೆ ಬೇಡಿಕೆಯೊಡ್ಡಿ ಇದೀಗ ಬಂಧಿತನಾಗಿರುವ ಅಧಿಕಾರಿ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಮಡಿಕೇರಿ ಸರಕಾರಿ ಬಸ್ ನಿಲ್ದಾಣದಲ್ಲಿ ‘ಗೂಗಲ್ ಪೇ’ ಮೂಲಕ ಹಣ ವರ್ಗಾಹಿಸಿಕೊಳ್ಳುತ್ತಿದ್ದ ಸಂದರ್ಭ ದಾಳಿ ನಡೆಸಿದ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಮಾದಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

(ಮೊದಲ ಪುಟದಿಂದ)

ಘಟನೆ ಹಿನ್ನೆಲೆ

ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ಬಿ. ಬಾಡಗ ಗ್ರಾಮದ ಕೆ.ಎಸ್. ಮಾದಪ್ಪ ಅವರು ತಮ್ಮ ತಂದೆ ಹೆಸರಿನಲ್ಲಿರುವ ತೋಟದ ನಡುವಿನಲ್ಲಿರುವ ಮೂರು ಬೀಟೆ ಮರವನ್ನು ಮನೆ ನಿರ್ಮಾಣದ ಉದ್ದೇಶದಿಂದ ಕಡಿಯಲು ಡಿಎಫ್‌ಓ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ಅವರ ಅರ್ಜಿಯನ್ನು ಸರ್ವೆಗಾಗಿ ಮಡಿಕೇರಿಯ ಎ.ಡಿ.ಎಲ್.ಆರ್. ಕಚೇರಿಗೆ ಕಳುಹಿಸಲಾಗಿತ್ತು.

ಈ ಜವಾಬ್ದಾರಿಯನ್ನು ವಹಿಸಿಕೊಂಡ ಲ್ಯಾಂಡ್ ಸರ್ವೆಯರ್ ಮಾದಪ್ಪ ಅವರು ಸರ್ವೆ ನಡೆಸಲು ಮೊದಲು ರೂ. ೧೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದನ್ನು ದೂರುದಾರ ನೀಡಿದ್ದಾರೆ. ಭಾಗಶಃ ಸರ್ವೆ ನಡೆಸಿದ ಬಳಿಕ ತಾ. ೨೧ ರಂದು ರೂ. ೫ ಸಾವಿರ ಹಣವನ್ನು ಮತ್ತೇ ಕೇಳಿದ್ದಾರೆ. ಇದನ್ನು ಕೂಡ ನೇರವಾಗಿ ನಗದು ರೂಪದಲ್ಲಿ ನೀಡಿದ್ದಾರೆ. ಬಳಿಕ ಸರ್ವೆಯ ದಾಖಲೆ ನೀಡಲು ರೂ. ೨ ಸಾವಿರದ ಜೊತೆಗೆ ವಿಸ್ಕಿ ಬಾಟಲ್ ನೀಡುವಂತೆ ಪೀಡಿಸಿದ್ದಾರೆ.

ಇದರಿಂದ ನೊಂದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಅಧಿಕಾರಿಗಳು ‘ಟ್ರಾö್ಯಪ್’ ಕಾರ್ಯಾಚರಣೆ ನಡೆಸುವ ಮೂಲಕ ಲ್ಯಾಂಡ್ ಸರ್ವೆಯರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ‘ಗೂಗಲ್ ಪೇ’ ಮೂಲಕ ರೂ. ೨ ಸಾವಿರ ಹಣ ವರ್ಗಾಹಿಸಿಕೊಳ್ಳುವ ಸಂದರ್ಭ ದಾಳಿ ನಡೆಸಿ ಮೊಬೈಲ್ ಹಾಗೂ ವಿಸ್ಕಿ ಬಾಟಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಪರ ಪೊಲೀಸ್ ಮಹಾ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕ ಡಾ. ಎ. ಸುಬ್ರಮಣ್ಯೇಶ್ವರ ರಾವ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್ ಬಾಬು ಡಿವೈಎಸ್‌ಪಿ ಪವನ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಉಪನಿರೀಕ್ಷಕರಾದ ಲೋಕೇಶ್, ಮುಖ್ಯಪೇದೆ ಮಂಜುನಾಥ್, ಸಿಬ್ಬಂದಿಗಳಾದ ಸಲಾವುದ್ದೀನ್, ಪ್ರವೀಣ್, ಲೋಹಿತ್, ಚಾಲಕ ಶಶಿಕುಮಾರ್ ಪಾಲ್ಗೊಂಡಿದ್ದರು.