ಕುಶಾಲನಗರ, ಜ. ೨೪ : ಶಿರಂಗಾಲ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ಜೀರ್ಣೋದ್ಧಾರ ಹಾಗೂ ಸ್ಥಿರ ಬಿಂದು ಪ್ರತಿಷ್ಠಾಪನಾ ಮಹೋತ್ಸವ ತಾ. ೨೬ ರಿಂದ ೪ ದಿನಗಳ ಕಾಲ ನಡೆಯಲಿದೆ.

ಅಂದಾಜು ೨.೭೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ನಾಲ್ಕು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ಸಭಾ ಕಾರ್ಯಕ್ರಮ, ಧಾರ್ಮಿಕ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ. ೨೬ ರಂದು ಶುದ್ಧ ಜಲ ಸಂಗ್ರಹಣಾ ಪೂಜೆ, ತಾ. ೨೭ ರಂದು ಶ್ರೀ ಮಂಟಿಗಮ್ಮ ತಾಯಿ ಪ್ರತಿಷ್ಠಾಪನೆ, ತಾ. ೨೮ ರಂದು ದುರ್ಗಾ ಮಂಡಲ ಪೂಜೆ, ತಾ. ೨೯ ರಂದು ನವರತ್ನ ಖಚಿತ ಪ್ರಾಯಶ್ಚಿತ ಹೋಮ ಪೂಜಾ ವಿಧಿ ವಿಧಾನಗಳು ಜರುಗಲಿವೆ.

ತಾ. ೨೭ ರಂದು ಮಧ್ಯಾಹ್ನ ೨ ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ವಹಿಸಲಿದ್ದು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ತಾಂತ್ರಿಕ ಸಲಹೆಗಾರ ಆರ್.ಆರ್. ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.

ತಾ. ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಮಹಾಸ್ವಾಮಿ ವಹಿಸಲಿದ್ದು, ಮತ್ತು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಹಾಗೂ ಕಿರಿಕೊಡ್ಲಿ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರುಗಳ ಉಪಸ್ಥಿತಿಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಅಂದು ಸಂಜೆ ಪ್ರೊ. ಕೃಷ್ಣೇಗೌಡ ಅವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. ತಾ. ೨೯ ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಗ್ರಾಮ ದೇವತಾ ಸಮಿತಿಯ ಪ್ರಮುಖರಾದ ಎಸ್.ಸಿ. ರುದ್ರಪ್ಪ, ಎಸ್.ಎಸ್. ಮಹೇಶ್, ಕಟ್ಟಡ ಜೀರ್ಣೋದ್ಧಾರ ಸಮಿತಿಯ ಎಸ್.ಕೆ ಪ್ರಸನ್ನ, ಬಿ.ಎಸ್ ಬಸವಣ್ಣಯ್ಯ, ಊರಿನ ಪ್ರಮುಖರಾದ ಎಸ್.ವಿ. ನಂಜುAಡಪ್ಪ, ಎಸ್.ಎಸ್. ಚಂದ್ರಶೇಖರ್, ಸಿ.ಎನ್ ಲೋಕೇಶ್, ಎಸ್.ಪಿ. ಚೇತನ್, ಎಂ.ಎಸ್. ಗಣೇಶ್, ಎನ್.ಎಸ್. ರಮೇಶ್ ಮತ್ತಿತರರ ಗ್ರಾಮಸ್ಥರು, ಪ್ರಮುಖರ ನೇತೃತ್ವದಲ್ಲಿ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆ ಭರದಿಂದ ಸಾಗುತ್ತಿದೆ.