ಬಸವ ವಸತಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲೇ ಪ್ರಥಮ ಮನೆ ನಿರ್ಮಿಸಿದ ಕೆದಮುಳ್ಳೂರು ಗ್ರಾಮ ಪಂಚಾಯಿತಿ

ವೀರಾಜಪೇಟೆ, ಜ. ೨೪: ಬಾಳಿ ಬದುಕಬೇಕಾಗಿದ್ದ ಸಹೋದರರ ಬಾಳಿನಲ್ಲಿ ಆಕಸ್ಮಿಕವಾಗಿ ಕತ್ತಲು ಆವರಿಸಿ ದೃಷ್ಟಿ ಹೀನರಾದರು. ಗುಡಿಸಲು ಮನೆಯು ಆಸರೆಯಾದ ಹಿನ್ನೆಲೆ ಗ್ರಾಮ ಪಂಚಾಯಿತಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿ ಅಂಧ ಸಹೋದರರಿಗೆ ಮಕರ ಸಂಕ್ರಾAತಿಯAದು ಉಡುಗೊರೆ ಯಾಗಿ ನೀಡಿತು.

ವೀರಾಜಪೇಟೆ-ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿ ನಿವಾಸಿ ಪಿ.ಕೆ. ರಾಮಚಂದ್ರ ಮತ್ತು ಸರೋಜ ದಂಪತಿ ಪುತ್ರರಾದ ಪಿ.ಆರ್. ಕೃಷ್ಣೇಂದ್ರ ಮತ್ತು ಪಿ.ಆರ್. ಜಯೇಂದ್ರ ದೃಷ್ಟಿ ಕಳೆದುಕೊಂಡು ಜೀವನ ಸಾಗಿಸುತ್ತಿರುವ ಸಹೋದರರು. ಬಡ ಜೀವಗಳ ಬಾಳಿಗೆ ಸ್ಥಳೀಯ ಆಡಳಿತವಾದ ಕೆದಮುಳ್ಳೂರು ಗ್ರಾಮ ಪಂಚಾಯಿತಿಯು ಬಸವ ಕಲ್ಯಾಣ ಯೋಜನೆ ಅಡಿಯಲ್ಲಿ ಮನೆಯೊಂದು ನಿರ್ಮಾಣ ಮಾಡಿ ಸಂಕ್ರಾAತಿ ದಿನದಂದು ಕಾಣಿಕೆಯಾಗಿ ನೀಡಿತು.

ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಪಿ.ಡಿ.ಓ., ಕಾರ್ಯದರ್ಶಿ, ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ತಹಶೀಲ್ದಾರ್ ಅರ್ಚನಾ ಭಟ್ ಅವರು, ಸಮಾಜ ಸಬಲೀಕರಣ ಎಂಬುದು ಬಡವರು, ದೀನ ದಲಿತರನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವುದಾಗಿದೆ.

ಚುನಾಯಿತ ಪ್ರತಿನಿಧಿಗಳು ಗ್ರಾಮದ ಏಳಿಗೆಯತ್ತ ಗಮನ ಹರಿಸಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು. ಈ ನಿಟ್ಟಿನಲ್ಲಿ ೨೦೨೧-೨೨ನೇ ಸಾಲಿನ ಬಸವ ವಸತಿ ಯೋಜನೆ ಅಡಿಯಲ್ಲಿ ಬಂದ ಯೋಜನೆಯ ರೂ. ೧ ಲಕ್ಷ ೨೦ ಸಾವಿರ ಮತ್ತು ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂ. ೨೮ ಸಾವಿರ ಒಟ್ಟು ರೂ. ೧ ಲಕ್ಷದ ೪೮ ಸಾವಿರ ವೆಚ್ಚದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ. ರಾಮಯ್ಯ ಅವರ ಶ್ರಮ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಷಮತೆಯಿಂದ ಮನೆ ನಿರ್ಮಾಣ ಮಾಡಿರುವುದು ನಿಜವಾಗಿಯು ಶ್ಲಾಘನೀಯ ಎಂದರು.

ಸುಮಾರು ಮೂರು ವರ್ಷಗಳ ಹಿಂದೆ ಸಹೋದರರು ವಾಸವಾಗಿದ್ದ ಮನೆ ಬಿದ್ದು ಹೋಗಿತ್ತು. ಮಾನವೀಯ ನೆಲೆಯಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಾಣ ಮಾಡಿ ವಾಸವಿರಲು ಅನುವು ಮಾಡಿಕೊಡಲಾಗಿತ್ತು. ನಂತರದಲ್ಲಿ ಸಹೋದರರನ್ನು ಸನಿಹದಲ್ಲಿದ್ದ ಮನೆಯೊಂದನ್ನು ಬಾಡಿಗೆ ಪಡೆದು ಬಾಡಿಗೆಗೆ ಹಣ ಪಂಚಾಯಿತಿಯಿAದ ನೀಡುತ್ತಿದ್ದೆವು. ಬಸವ ವಸತಿ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಬಂದ ಅನುದಾನ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದೀಗ ಎರಡು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ.

ಮನೆಯ ನಿರ್ಮಾಣ ಕಾರ್ಯದಲ್ಲಿ ಹಿಂದೂ ಮಲಯಾಳಿ ಅಸೋಸಿಯೇಷನ್ ಅವರ ನೆರವು ಹಾಗೂ ಪಂಚಾಯಿತಿ ಪಿ.ಡಿ.ಓ. ಪ್ರಮೋದ್ ಅವರ ಸಹಕಾರ ಪ್ರಮುಖ ವಾಗಿತ್ತು ಎಂದು ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಕೆ.ಎಂ. ರಾಮಯ್ಯ ತಿಳಿಸಿದರು.

ಸರ್ಕಾರದಿಂದ ಹಲವು ಯೋಜನೆಗಳು ಜಾರಿಗೊಳ್ಳುತ್ತವೆ. ಜನಪ್ರತಿನಿಧಿಗಳು ಮತ್ತು ಇಲಾಖೆಯ ಸಿಬ್ಬಂದಿಗಳ ಇಚ್ಚಾಶಕ್ತಿ ಮತ್ತು ಶ್ರಮವನ್ನು ವಿನಿಯೋಗ ಮಾಡಿದ್ದಲ್ಲಿ ಯೋಜನೆಗಳು ಶಾಶ್ವತ ರೂಪ ವಾಗುತ್ತವೆ.

ಇದಕ್ಕೆ ನೈಜ ಉದಾಹರಣೆ ಗ್ರಾಮದ ಏಳಿಗೆಗಾಗಿ ಸದಾ ಮುಂದಾಗಿರುವ ಕೆ.ಎಂ. ರಾಮಯ್ಯ ಅವರ ಪರಿಶ್ರಮ ಮತ್ತು ಪಿ.ಡಿ.ಓ. ಪ್ರಮೋದ್ ಅವರ ಸಹಕಾರ. ಈ ನಿಟ್ಟಿನಲ್ಲಿ ಸಹೋದರರಿಗೆ ನಿರ್ಮಾಣ ಮಾಡಿರುವ ಮನೆಯ ಕಾರ್ಯದಲ್ಲಿ ಸರ್ಕಾರದ ಅನುದಾನದೊಂದಿಗೆ ಹಿಂದೂ ಮಲಯಾಳಿ ಅಸೋಸಿ ಯೇಷನ್ ವೀರಾಜಪೇಟೆ ದಾನಿಗಳ ಸಹಕಾರದಿಂದ ಮನೆ ನಿರ್ಮಾಣಕ್ಕೆ ನೆರವು ನೀಡಲಾಗಿದ್ದು, ಸಹೋದರರ ಮುಂದಿನ ಭವಿಷ್ಯವು ಉತ್ತಮವಾಗಲಿ ಎಂದು ವೀರಾಜಪೇಟೆ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಎ. ವಿನೂಪ್ ಕುಮಾರ್ ಅಭಿಪ್ರಾಯಿಸಿದರು.

ಅಂಧರಾದ ನಾವುಗಳು ಗುಡಿಸಲು ಮನೆಯಲ್ಲಿ ಜೀವನ ಸಾಗಿಸುತ್ತಿದ್ದೆವು, ಇದನ್ನು ಮನಗಂಡು ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಯ್ಯ ಮತ್ತು ಗ್ರಾಮ ಪಂಚಾಯಿತಿ ಹಾಗೂ ಮಲಯಾಳಿ ಸಂಘವು ಜೀವನ ಸಾಗಿಸಲು, ವಾಸ ಮಾಡಲು ಮನೆಯೊಂದು ನಿರ್ಮಾಣ ಮಾಡಿ ಬದುಕಲು ದಾರಿ ಕಲ್ಪಿಸಿದ್ದಾರೆ. ಮನೆ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಸರ್ವರಿಗೂ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತಿದ್ದೇವೆ ಎಂದು ಸಹೋದರರಾದ ಪಿ.ಆರ್. ಕೃಷ್ಣೇಂದ್ರ ಹಾಗೂ ಜಯೇಂದ್ರ ಅವರು ಹೇಳಿದರು.

ಸಹೋದರರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಕಂದಾಯಾಧಿಕಾರಿ ಹರೀಶ್, ಗ್ರಾಮ ಲೆಕ್ಕಿಗರಾದ ಹೇಮಂತ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಧ್ಯಕ್ಷೆ ಎಂ.ಬಿ. ಮೀನಾಕ್ಷಿ, ಸದಸ್ಯರಾದ ಜಯಂತಿ, ಕಾರ್ಯದರ್ಶಿ ಸತೀಶ್ ಪಿ.ಎಸ್., ಹಿಂದೂ ಮಲಯಾಳಿ ಅಸೋಸಿ ಯೇಷನ್‌ನ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

- ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ