ಮಡಿಕೇರಿ, ಜ. ೨೩: ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೩ರ ಚಾಂಪಿಯನ್ ಆಗಿ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಹೊರಹೊಮ್ಮಿದೆ. ಇಂಚರ ಕೊಡಗು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಂದ ಬೆಳಕಿನ ಕಾರಣದಿಂದ ೨ ಓವರ್‌ಗೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಚರ ಕೊಡಗು ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಬ್ಯಾಟಿಂಗ್‌ನಲ್ಲಿ ಆಟಗಾರರು ಎಡವಿದ್ದರಿಂದ ೨ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೭ ರನ್ ಗಳಿಸಲಷ್ಟೇ ಶಕ್ತರಾದರು. ಗೆಲ್ಲಲು ೮ ರನ್‌ಗಳ ಗುರಿ ಪಡೆದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಮೊದಲ ಓವರ್‌ನಲ್ಲಿ ಇನ್ನು ಒಂದು ಎಸೆತ ಬಾಕಿ ಇರುವಾಗಲೇ ವಿಕೆಟ್ ಕಳೆದುಕೊಳ್ಳದೆ ೧೧ ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಪರ ಮಂಜು ೩ ಎಸೆತಗಳಲ್ಲಿ ೯ ರನ್ ಗಳಿಸಿದರಲ್ಲದೆ ೧ ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಚರ ಕೊಡಗು ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೆನ್ಸಾ ಕುಶಾಲನಗರ ತಂಡ ೪ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಚರ ಕೊಡಗು ತಂಡ ೩.೨ ಓವರ್‌ಗಳಲ್ಲಿಯೇ ೫೧ ರನ್ ಗಳಿಸಿ ಫೈನಲ್ ಪ್ರವೇಶಿಸಿತು.
ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೂರ್ಗ್ ಮೌಂಟ್ಸ್ ಲಯನ್ಸ್ ತಂಡ ೪ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೫ ರನ್ ಗಳಿಸಲಷ್ಟೇ ಶಕ್ತವಾಯಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ೨ ಓವರ್‌ಗಳಲ್ಲಿಯೇ ವಿಕೆಟ್ ಕಳೆದುಕೊಳ್ಳದೆ ೨೬ ರನ್‌ಗಳಿಸಿ ೨ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅವಕಾಶ ಪಡೆಯಿತು.
೨ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಸೆನ್ಸಾ ಕುಶಾಲನಗರ ತಂಡ ಬೌಲಿಂಗ್ ಆಯ್ದುಕೊಂಡು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ೪ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೫ ರನ್‌ಗಳಿಸಿತು. ಗೆಲ್ಲಲು ಬೇಕಿದ್ದ ೪೬ ರನ್‌ಗಳ ಗುರಿ ಬೆನ್ನಟ್ಟಿದ ಸೆನ್ಸಾ ಕುಶಾಲನಗರ ತಂಡ ೪ ಓವರ್‌ಗಳಲ್ಲಿ ೪೧ ರನ್‌ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ಉಳಿದಂತೆ ಮೀಡಿಯಾ ವಾರಿಯರ್ಸ್, ಮೀಡಿಯಾ ಕೂಲ್, ಮೀಡಿಯಾ ಕ್ಯಾಪ್ಟನ್ ೧೨, ಗೋಣಿಕೊಪ್ಪ ಮೀಡಿಯಾ ಕಿಂಗ್ಸ್ ತಂಡಗಳು ಪಾಲ್ಗೊಂಡಿದ್ದವು. ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯ ೧೦೭ ಪತ್ರಕರ್ತರು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ರಮೇಶ್, ಮಂಜು, ಸಚಿನ್ ಕಾರ್ಯನಿರ್ವಹಿಸಿದರು.
‘ಕಾಲಮಾನಕ್ಕೆ ಅನುಗುಣವಾಗಿ ಪತ್ರಕರ್ತರೂ ಹೊಂದಿಕೊಳ್ಳಬೇಕಿದೆ’
ಮಡಿಕೇರಿ ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಪತ್ರಕರ್ತರೂ ತಾಂತ್ರಿಕವಾಗಿ ‘ಅಪ್‌ಡೇಟ್’ ಆಗುವ ಅಗತ್ಯವಿದೆ ಎಂದು ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು. ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಪ್ರೆಸ್‌ಕ್ಲಬ್ ಪ್ರೀಮಿಯರ್ ಲೀಗ್ – ೩ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮೊದಲೆಲ್ಲಾ ಪತ್ರಕರ್ತರು ಡೈರಿ, ಪೆನ್ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಈಗ ಮೊಬೈಲ್ ಒಂದು ಇದ್ದರೆ ಸಾಕು, ಎಲ್ಲಾ ಕೆಲಸವನ್ನೂ ಸುಲಭವಾಗಿ ಮಾಡಬಹುದಾಗಿದೆ ಎಂದರು. ಪತ್ರಕರ್ತರ ಒತ್ತಡದ ಬದುಕಿನಲ್ಲಿ ಉಲ್ಲಾಸ ತುಂಬಲು ಕ್ರೀಡಾಚಟುವಟಿಕೆಗಳು ಹೆಚ್ಚು ಅನುಕೂಲವಾಗಿದೆ. ಕ್ರಿಕೆಟ್ ಬಾಂಧವ್ಯ ಬೆಸೆಯುತ್ತದೆ ಎಂದು ಹೇಳಿದರು.
ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿದೆ. ಇದೇ ರೀತಿಯಲ್ಲಿ ಬೆಳ್ಳಿಮಹೋತ್ಸವ ಹಿನ್ನೆಲೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಬಗೆಯ ಕಾರ್ಯಕ್ರಮಗಳಲ್ಲೂ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಜಿಲ್ಲೆಯಾದ್ಯಂತ ಕರ್ತವ್ಯ ನಿರ್ವಹಿಸುವ ವೃತ್ತಿ ಬಾಂಧವರನ್ನು ಪರಸ್ಪರ ಪರಿಚಯಿಸಲು, ಉತ್ತಮ ಸಂಬAಧ ಬೆಳೆಸಿಕೊಳ್ಳಲು ಕ್ರಿಕೆಟ್ ಸಹಕಾರಿ ಆಗಿದೆ ಎಂದು ಹೇಳಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡಿದ್ದ ಪಂದ್ಯಾವಳಿ ಇದಾಗಿತ್ತು. ಈ ಆವೃತ್ತಿಯೂ ಯಶಸ್ವಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರೆಸ್‌ಕ್ಲಬ್ ಖಜಾಂಚಿ ಬೊಳ್ಳಜೀರ ಅಯ್ಯಪ್ಪ, ಪ್ರೆಸ್‌ಕ್ಲಬ್ ಪ್ರೀಮಿಯರ್ ಲೀಗ್ –೩ ಸಂಚಾಲಕ ನವೀನ್ ಡಿಸೋಜಾ ವೇದಿಕೆಯಲ್ಲಿ ಇದ್ದರು. ತಂಡಗಳ ಮಾಲೀಕರು, ನಾಯಕರು ತಮ್ಮ ಅಭಿಪ್ರಾಯ ಹಂಚಿಕೊAಡರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರು. ಚಂದ್ರಮೋಹನ್ ಸ್ವಾಗತಿಸಿದರು.