ವೀರಾಜಪೇಟೆ, ಜ. ೨೩: ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕನ್ನಡ ನುಡಿ ಜಾತ್ರೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು, ಗಡಿನಾಡಲ್ಲಿ ಕನ್ನಡ ಭವನಗಳನ್ನು ತೆರೆಯುವಂತಾಗಬೇಕು, ಕನ್ನಡಪರ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಬೇಕು, ಕನ್ನಡ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು, ಕೊಡಗಿನ ಕೃಷಿ ಚಟುವಟಿಕೆಗೆ ಉತ್ತೇಜನವನ್ನು ನೀಡಬೇಕು, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಶಬರೀಶ್ ಶೆಟ್ಟಿ ನಿರ್ಣಯ ಮಂಡನೆ ಮಾಡಿದರು.
ಬಹಿರಂಗ ಅಧಿವೇಶನದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕಸಾಪ ಕೊಡಗು ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಸಮಾರೋಪ ಭಾಷಣ ಮಾಡಿ, ಸಾಹಿತ್ಯ ಸಮ್ಮೇಳನವೆಂಬುದು ಕನ್ನಡಿಗರಿಗೆ ಒಂದು ರೀತಿಯ ಹಬ್ಬವಿದ್ದಂತೆ. ಕನ್ನಡದ ಮನಸ್ಸುಗಳನ್ನು ಸಮ್ಮಿಲನಗೊಳಿಸುವ ಈ ಹಬ್ಬ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವಂತಹ ವಾತಾವರಣವನ್ನು ಸೃಷ್ಟಿಸಬೇಕು. ಮನಸ್ಸಿನ ಆರೋಗ್ಯಕ್ಕೆ ಕಲೆ ಸಂಗೀತ, ಸಾಹಿತ್ಯ, ನಾಟಕ ಎಲ್ಲವೂ ಬೇಕು. ಈ ನಿಟ್ಟಿನಲ್ಲಿ ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕೆಂದರು.
ಸಮ್ಮೇಳನಾಧ್ಯಕ್ಷ ಡಾ. ಎಸ್.ವಿ. ನರಸಿಂಹನ್ ಆಶಯ ನುಡಿಗಳನ್ನಾಡಿ ಸಾಹಿತ್ಯವೆಂಬುದು ಜನರ ಬದುಕಿನ ಪ್ರತಿಬಿಂಬವಾಗಬೇಕು, ಮನಸ್ಸುಗಳ ನಡುವಿನ ಕಂದಕವನ್ನು ಹೆಚ್ಚಿಸದೆ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಕನ್ನಡ ನಾಡು ನುಡಿಯನ್ನು ಕಾಪಾಡುವುದು, ಸಾಹಿತ್ಯ, ಕಲೆ, ಸಂಗೀತ ಹಾಗೂ ಸಂಸ್ಕೃತಿಯನ್ನು ಬೆಳೆಸುವುದು ಈ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಎಂದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೆ.ಅಪ್ಪಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷರಾದ ಧರಣಿಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ವಿಎಸ್‌ಎಸ್‌ಎನ್ ಅಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಉಪಸ್ಥಿತರಿದ್ದರು.