ಸೋಮವಾರಪೇಟೆ, ಜ. ೨೩: ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡ ಒದಗಿಸುವ ಉದ್ದೇಶದಿಂದ ಸರ್ಕಾರ ೨ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿನ ಆರ್‌ಎಂಸಿ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸೋಮವಾರಪೇಟೆಯಲ್ಲಿನ ಅಗ್ನಿಶಾಮಕ ಠಾಣೆ ಮಹದೇಶ್ವರ ಬಡಾವಣೆಯಲ್ಲಿರುವ ಖಾಸಗಿ ಕಟ್ಟಡದಲ್ಲಿ ಮಾಸಿಕ ಬಾಡಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಠಾಣೆಗೆ ಸ್ವಂತ ನಿವೇಶನದೊಂದಿಗೆ ಕಟ್ಟಡವನ್ನು ಒದಗಿಸುವ ಉದ್ದೇಶದಿಂದ ಇದೀಗ ೨ ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದರು.

ಆರ್‌ಎAಸಿಗೆ ಸೇರಿದ ೫೦ ಸೆಂಟ್ ಜಾಗವನ್ನು ಅಗ್ನಿಶಾಮಕ ಠಾಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ ೨೫ ಸೆಂಟ್ಸ್ನಲ್ಲಿ ಠಾಣೆ, ಉಳಿದ ೨೫ ಸೆಂಟ್ಸ್ನಲ್ಲಿ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಗುತ್ತಿಗೆದಾರರು ಹಾಗೂ ಅಭಿಯಂತರರಿಗೆ ಸೂಚಿಸಿದ ಶಾಸಕ ರಂಜನ್, ತುರ್ತು ಸಂದರ್ಭದಲ್ಲಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ. ಕೇವಲ ಅಗ್ನಿ ಅನಾಹುತ ಮಾತ್ರವಲ್ಲದೇ ಇನ್ನಿತರ ಅವಘಡಗಳು ಸಂಭವಿಸಿದಾಗಲೂ ಸಿಬ್ಬಂದಿಗಳು ನೆರವಿಗೆ ಧಾವಿಸುತ್ತಿದ್ದಾರೆ. ಇವರುಗಳಿಗೆ ಸುಸಜ್ಜಿತ ವಸತಿ ಗೃಹ ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕತ್ಯರ್ವವಾಗಿದ್ದು, ಈ ನಿಟ್ಟಿನಲ್ಲಿ ೨ ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಾಜಿ ಅಧ್ಯಕ್ಷ ಮನುಕುಮಾರ್ ರೈ, ತಾ.ಪಂ. ಮಾಜೀ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಮಾಜಿ ಸದಸ್ಯ ಬಿ.ಎ. ಧರ್ಮಪ್ಪ, ತಂಗಮ್ಮ, ಹಾನಗಲ್ಲು ಗ್ರಾ.ಪಂ. ಸದಸ್ಯೆ ರೇಣುಕ ವೆಂಕಟೇಶ್, ಅಗ್ನಿಶಾಮಕ ಠಾಣೆಯ ಉಸ್ತುವಾರಿ ಬಿ. ಈಶ್ವರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.