ಸೋಮವಾರಪೇಟೆ, ಜ.೨೩: ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಕಾಪಾಡಿಕೊಳ್ಳುವುದು ಕ್ರೀಡಾಪಟುವಿನ ಗುರಿ ಆಗಿರಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.

ಇಂದಿರಾಗಾAಧಿ ಅಭಿಮಾನಿಗಳ ಸಂಘ ಹಾಗೂ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ೩೬ನೇ ವರ್ಷದ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಹಾಗೂ ೨ನೇ ವರ್ಷದ ಅಂತರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಎಲೆ ಮರೆಯ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ನಮ್ಮ ಕರ್ತವ್ಯವಾಗಬೇಕು. ಕ್ರೀಡಾ ಜಿಲ್ಲೆಯಾದ ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯ ಕ್ರೀಡಾಪಟುಗಳಿದ್ದು ಜಿಲ್ಲೆಯಲ್ಲಿ ಇದೀಗ ನಿರಂತರ ಕ್ರೀಡಾಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕಾಟ್ನಮನೆ ಗಿರೀಶ್ ಮಾತನಾಡಿ, ಧೀಮಂತ ಪ್ರಧಾನಿಯಾಗಿದ್ದ ದಿವಂಗತ ಇಂದಿರಾಗಾAಧಿ ಯವರ ಹೆಸರಿನಲ್ಲಿ ಇಂದಿಗೂ ಕ್ರೀಡಾಕೂಟ ನಡಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಅದರಲ್ಲೂ ಕೂಲಿ ಕಾರ್ಮಿಕರೇ ಹೆಚ್ಚು ಇರುವ ಸಂಘದ ಸದಸ್ಯರು ತಮ್ಮ ಶ್ರಮದ ಸ್ವಲ್ಪ ಭಾಗವನ್ನು ಕ್ರೀಡಾಕೂಟಗಳಿಗೆ ಮೀಸಲಿಡುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜೀ ಸದಸ್ಯ ಹೆಚ್.ಎಸ್.ವೆಂಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ರೈತ ಮುಖಂಡ ಎಸ್.ಎಂ.ಕೃಷ್ಣ, ಜಮೀರ್, ಹಣಕೋಡು ಮಹೇಶ್, ಕ್ರೀಡಾ ವೀಕ್ಷಕ ವಿವರಣೆಗಾರ ಇಸಾಕ್, ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜ್, ಕಾರ್ಯದರ್ಶಿ ಹೆಚ್.ಬಿ.ರಾಜಪ್ಪ ಉಪಸ್ಥಿತರಿದ್ದರು.