ಮಡಿಕೇರಿ, ಜ. ೨೨: ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವುದ ರೊಂದಿಗೆ ವ್ಯವಸ್ಥೆಯೊಳಗಿನ ತಪ್ಪನ್ನು ತಿದ್ದುವ ಮೂಲಕ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.

ಕೊಡಗು ಪ್ರೆಸ್‌ಕ್ಲಬ್ ಪ್ರಯುಕ್ತ ಇಲ್ಲಿನ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್ ಕ್ಲಬ್ ಪ್ರೀಮಿ ಯರ್ ಲೀಗ್ - ೩ ಕ್ರಿಕೆಟ್ ಪಂದ್ಯಾ ವಳಿ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸಂವಿಧಾನ ರಕ್ಷಕರು. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ತಪ್ಪು ದಾರಿ ತುಳಿದರೆ ಎಚ್ಚರಿಸುವ ಕೆಲಸ ಪತ್ರಿಕಾ ರಂಗ ಮಾಡುತ್ತಿದೆ ಎಂದ ಅವರು, ಒತ್ತಡ ದಲ್ಲಿರುವ ಪತ್ರಕರ್ತರಿಗೆ ಕ್ರೀಡಾಕೂಟ ಗಳು ದೈಹಿಕ ಹಾಗೂ ಮಾನಸಿಕ ಉಲ್ಲಾಸ ನೀಡುತ್ತವೆ. ಈ ರೀತಿ ವೇದಿಕೆಯಿಂದ ಪತ್ರಕರ್ತರ ಪ್ರತಿಭೆ ಅನಾವರಣಕ್ಕೆ ಅವಕಾಶವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಪತ್ರಿಕಾರಂಗ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿ ಸುತ್ತದೆ. ವ್ಯವಸ್ಥೆಯ ಲೋಪದೋಷ, ಅನ್ಯಾಯ, ಅನಾಚಾರ ಬಯಲಿಗೆಳೆ ಯುವ ಶಕ್ತಿ ಪತ್ರಿಕಾರಂಗಕ್ಕಿದೆ. ಸಮಾಜದ ನೈಜಸ್ಥಿತಿ ತಿಳಿಸುತ್ತಾ ಒಳಿತು ಕೆಡುಕುಗಳಿಗೆ ಸಾಕ್ಷಿಯಾಗುವ ಪತ್ರಕರ್ತರನ್ನು ಸೈನಿಕರಿಗೆ ಹೋಲಿಸ ಬಹುದು ಎಂದು ಅಭಿಪ್ರಾಯಪಟ್ಟರು.

ಮತ್ತೊಬ್ಬ ಮುಖ್ಯ ಅತಿಥಿ ಮುಳಿಯ ಜ್ಯುವೆಲ್ಸ್ ಮಡಿಕೇರಿ ಶಾಖೆ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಮಾತನಾಡಿ, ಕ್ರೀಡೆ ನವೋಲ್ಲಾಸ ತುಂಬುತ್ತದೆ. ಆಟಗಳು ಸ್ಫೂರ್ತಿ ಕೊಡುತ್ತದೆ. ದುಶ್ಚಟಗಳಿಂದ ದೂರ ಮಾಡುತ್ತದೆ ಎಂದರು.

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಡಗು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿದರು. ಚಂದ್ರಮೋಹನ್ ವಂದಿಸಿದರು. ಪತ್ರಕರ್ತರ ೮ ತಂಡ ಗಳು ಟ್ರೋಫಿಗಾಗಿ ಸೆಣಸಾಡಿದವು.