ಸೋಮವಾರಪೇಟೆ, ಜ. ೨೨: ಕಳೆದ ೨೦೨೨ರ ಡಿಸೆಂಬರ್ ಎರಡನೇ ಮತ್ತು ಮೂರನೇ ವಾರ ಸುರಿದ ಅಕಾಲಿಕ ಮಳೆಯಿಂದ ಭತ್ತದ ಫಸಲು ನಷ್ಟವಾಗಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರು, ಪರಿಹಾರ ಹಣ ಬಂದಿದೆಯೇ? ಎಂದು ತಮ್ಮ ಖಾತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿದ್ದಾರೆ.

ಈಗಾಗಲೇ ಅಕಾಲಿಕ ಮಳೆಯಿಂದ ಕಾಫಿ ಫಸಲು ನಷ್ಟವಾಗಿದ್ದು, ಬೆಳೆಗಾರರಿಗೆ ೫ ಸಾವಿರದಿಂದ ಹಿಡಿದು ೬೦ ಸಾವಿರದವರೆಗೆ ಪರಿಹಾರ ಹಣ ಖಾತೆಗೆ ಜಮೆಯಾಗಿದೆ. ಇದರಲ್ಲಿಯೂ ನೂರಾರು ಮಂದಿಗೆ ಇನ್ನೂ ಪರಿಹಾರ ಬಿಡುಗಡೆಯಾಗಬೇಕಿದೆ.

ಈ ನಡುವೆ ಅವಿಭಜಿತ ಸೋಮವಾರಪೇಟೆ ತಾಲೂಕಿನಾದ್ಯಂತ ಡಿಸೆಂಬರ್ ತಿಂಗಳಿನಲ್ಲಿ ಮೋಡದ ವಾತಾವರಣದೊಂದಿಗೆ ಅಕಾಲಿಕ ಮಳೆ ಸುರಿದ ಹಿನ್ನೆಲೆ ಕಟಾವಿಗೆ ಬಂದಿದ್ದ ಭತ್ತದ ಫಸಲು ಗದ್ದೆಯಲ್ಲಿಯೇ ಉದುರಿತ್ತು. ಪರಿಣಾಮ ಅಕ್ಕಿಯಾಗಬೇಕಿದ್ದ ಭತ್ತ ಮಣ್ಣು ಪಾಲಾಗಿದ್ದು, ರೈತರು ಭಾರೀ ನಷ್ಟ ಅನುಭವಿಸಿದ್ದರು.

ತಿಂಗಳುಗಟ್ಟಲೆ ಗದ್ದೆಯಲ್ಲಿ ಕೆಲಸ ಮಾಡಿ, ಫಸಲು ಕೈ ಸೇರಬೇಕೆನ್ನುವ ಸಮಯದಲ್ಲಿ ವರುಣದ ಅವಕೃಪೆ ಬೀರಿದ್ದರಿಂದ ಅನ್ಯಮಾರ್ಗವಿಲ್ಲದೇ ನಷ್ಟ ಅನುಭವಿಸಬೇಕಾಯಿತು. ಭತ್ತದ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದ ಸಂದರ್ಭವೇ ಹವಾಮಾನ ವೈಪರಿತ್ಯವಾಗಿ ಅಕಾಲಿಕ ಮಳೆ ಸುರಿಯಿತು.

ಕಾರ್ಮಿಕರ ಕೊರತೆಯ ನಡುವೆಯೂ ಭತ್ತದ ಪೈರನ್ನು ಕೊಯ್ಲು ಮಾಡಿ ಇನ್ನೇನು ಮನೆಗೆ ತುಂಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಮಳೆರಾಯನ ಆಗಮನವಾಗಿದ್ದು, ಕೊಯ್ಲು ಮಾಡಿದ್ದ ಪೈರನ್ನು ಮನೆಗೆ ಸಾಗಿಸಿ, ಭತ್ತ ಬಿಡಿಸಲು ಸಾಧ್ಯವಾಗಲಿಲ್ಲ.

ಗದ್ದೆಗಳಲ್ಲಿ ಶೀತ ಹೆಚ್ಚಾದ್ದರಿಂದ ಫಸಲು ಮಣ್ಣು ಸೇರಿ ರೈತರಿಗೆ ನಷ್ಟ ಸಂಭವಿಸಿತು. ಇದರಿಂದಾಗಿ ರೈತರು ಪರಿಹಾರಕ್ಕಾಗಿ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ತಾಲೂಕಿನಲ್ಲಿ ಸ್ವೀಕರಿಸಿದ ಒಟ್ಟು ೩೮೫ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ.

ಅಕಾಲಿಕ ಮಳೆಯಿಂದ ತಾಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳಲ್ಲಿ ಹೆಚ್ಚು ಹಾನಿಯಾಗಿದೆ. ಕೊಡ್ಲಿಪೇಟೆಯಲ್ಲಿ ೯೦, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ೧೩೦, ಗರ್ವಾಲೆ ಭಾಗದಲ್ಲಿ ೨೦, ಕುಶಾಲನಗರ ವ್ಯಾಪ್ತಿಯಲ್ಲಿ ೭೦, ಸೋಮವಾರಪೇಟೆ ವ್ಯಾಪ್ತಿಯಲ್ಲಿ ೭೫ ಮಂದಿ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ತಾಲೂಕು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತೀವ್ರ ಹಾನಿಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಿದ ಕಡೆಗಳಲ್ಲಿ ರೈತರೇ ಜಿಪಿಎಸ್ ಫೋಟೋದೊಂದಿಗೆ ಪರಿಹಾರಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಮಧ್ಯೆ ಮಳೆಯಿಂದ ಹಾನಿಯಾಗದಿದ್ದರೂ ಸಹ ಕೆಲವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಇಂತಹ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ವರದಿಯಾಗಿರುವ ೩೮೫ ಮಂದಿ ರೈತರ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ. ಇನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರಿಹಾರ ಸಂಬAಧಿತ ಕ್ರಮಗಳು ಆಗಬೇಕಿದ್ದು, ಇತ್ತ ರೈತರು ಪರಿಹಾರ ಹಣ ಬಂದಿದೆಯೇ ಎಂದು ತಮ್ಮ ಖಾತೆಯನ್ನು ಪರಿಶೀಲಿಸುತ್ತಿದ್ದಾರೆ.

- ವಿಜಯ್